ಕೋಲ್ಕತ್ತಾ : ಆರ್ಜಿ ಕರ್ ಕಾಲೇಜಿನಲ್ಲಿ ನಡೆದಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ತನಿಖೆಯ ಹಾದಿ ತಪ್ಪಿಸಿದ ಮೂವರು ಐಪಿಎಸ್ ಅಧಿಕಾರಿಗಳನ್ನು ಸಿಎಂ ಸುವೇಂದು ಅಧಿಕಾರಿ ಅಮಾನತುಗೊಳಿಸಿದ್ದಾರೆ.ನಬನ್ನಾದಲ್ಲಿ ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಜಿ ಕರ್ ಕಾಲೇಜಿನಲ್ಲಿ ನಡೆದಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಸಂತ್ರಸ್ತೆ ಕುಟುಂಬಕ್ಕೆ ಲಂಚ ಕೊಡಲು ಯತ್ನಿಸಿದ್ದಾರೆ.
ಅಲ್ಲದೇ ಲಿಖಿತ ಅನುಮತಿ ಪಡೆಯದೇ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಹಿನ್ನೆಲೆ ಆಗಿನ ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯೆಲ್, ಅಭಿಷೇಕ್ ಗುಪ್ತಾ ಹಾಗೂ ಇಂದಿರಾ ಮುಖ್ಯೋಪಾಧ್ಯಾಯ ಮೂವರನ್ನು ಅಮಾನತುಗೊಳಿಸಿದ್ದಾರೆ. ಸದ್ಯ ಮೂವರ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಭಾರತೀಯ ಜನತಾ ಪಕ್ಷವು ಈ ವಿಷಯವನ್ನು ಕೆದಕಿ, ಸಂತ್ರಸ್ತೆಯ ತಾಯಿಗೆ ಪಾಣಿಹಟಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದರು. ಜೊತೆಗೆ ಆರ್ಜಿ ಕರ್ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಬಿಜೆಪಿಯ ಚುನಾವಣಾ ಪೂರ್ವ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಅದರಂತೆ ರತ್ನ ದೇಬ್ನಾಥ್ ಅವರು ಟಿಎಂಸಿಯ ತೀರ್ಥಂಕರ ಘೋಷ್ ಅವರನ್ನು 28,836 ಮತಗಳ ಅಂತರದಿಂದ ಸೋಲಿಸಿದರು.

















