ಮನೆ ರಾಷ್ಟ್ರೀಯ ನೈಋತ್ಯ ಮುಂಗಾರು, ಮೇ 26ರಿಂದ ಕೇರಳಕ್ಕೆ ಎಂಟ್ರಿ..!

ನೈಋತ್ಯ ಮುಂಗಾರು, ಮೇ 26ರಿಂದ ಕೇರಳಕ್ಕೆ ಎಂಟ್ರಿ..!

0

ನವದೆಹಲಿ : ಈ ವರ್ಷದ ನೈಋತ್ಯ ಮುಂಗಾರು ಮೇ 26ರಿಂದ ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರತಿವರ್ಷ ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ, ಈ ಬಾರಿ ಐದು ದಿನ ಮುಂಚಿತವಾಗಿ ಆರಂಭವಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 26ಕ್ಕೆ ನಾಲ್ಕು ದಿನಗಳ ವ್ಯತ್ಯಾಸದ ಸಾಧ್ಯತೆಯೊಂದಿಗೆ ಮುಂಗಾರು ಕೇರಳ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷವೂ ಮೇ 24ರಂದು ಮುಂಗಾರು ಕೇರಳ ಪ್ರವೇಶಿಸಿತ್ತು.

ಭಾರತದಲ್ಲಿ ಸಾಮಾನ್ಯವಾಗಿ ನೈಋತ್ಯ ಮುಂಗಾರು ಪ್ರವೇಶಿಸುವ ಮೊದಲ ಹಂತವೇ ಕೇರಳ. ಇದನ್ನೇ ದೇಶದಲ್ಲಿ ಮಳೆಗಾಲ ಆರಂಭವಾಗುವ ಪ್ರಮುಖ ಸೂಚಕವಾಗಿ ಪರಿಗಣಿಸಲಾಗುತ್ತದೆ. ಮುಂಗಾರು ಆರಂಭವಾದ ಬಳಿಕ ಹಂತಹಂತವಾಗಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಮುಂಗಾರು ಮಳೆ ವಿಸ್ತರಿಸುತ್ತದೆ. ಈ ವರ್ಷ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಳ್ಳುತ್ತಿರುವ ಎಲ್ ನಿನೊ ಪರಿಣಾಮದಿಂದ ಮುಂಗಾರು ದುರ್ಬಲವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ ನಿನೊ ಎಂದರೆ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿ ಸಮುದ್ರದ ಮೇಲ್ಮೈ ಉಷ್ಣತೆ ಸಾಮಾನ್ಯಕ್ಕಿಂತ ಹೆಚ್ಚಾಗುವ ಹವಾಮಾನ ಸ್ಥಿತಿ. ಇದರ ಪರಿಣಾಮದಿಂದ ಜಗತ್ತಿನ ಹಲವೆಡೆ ಹವಾಮಾನದಲ್ಲಿ ದೊಡ್ಡ ಬದಲಾವಣೆಗಳು ಉಂಟಾಗುತ್ತವೆ. ಎಲ್ ನಿನೊ ಹವಾಮಾನ ಸ್ಥಿತಿ ಉಂಟಾದಾಗ ಸಾಮಾನ್ಯವಾಗಿ ಭಾರತದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.