ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಭೇಟಿಗೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾನ್‌ನಿಂದ ಚೀನಾಕ್ಕೆ ತೈಲ ಮಾರಾಟ ಮತ್ತು ಸಾಗಣೆಗೆ ಅನುಕೂಲ ಮಾಡಿಕೊಟ್ಟ 12 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಅಮೆರಿಕ ಖಜಾನೆ ಇಲಾಖೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ತೈಲ ಮಾರಾಟದಲ್ಲಿ ತನ್ನ ಪಾತ್ರವನ್ನು ಮರೆಮಾಚಿ ಮತ್ತು ಇರಾನ್ ಆಡಳಿತಕ್ಕೆ ಆರ್ಥಿಕ ಸಹಾಯ ಮಾಡಲು ಈ ಕಂಪನಿಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದೆ. ಇರಾನ್ ಮೂಲದ ಮೂವರು ವ್ಯಕ್ತಿಗಳು ಮತ್ತು ಹಾಂಕಾಂಗ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಒಂಬತ್ತು ಕಂಪನಿಗಳನ್ನು ಹೊಸದಾಗಿ ನಿರ್ಬಂಧಿಸಲಾಗಿದೆ. ಯುಎಸ್ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅವರೊಂದಿಗೆ ನಡೆಸುವ ಎಲ್ಲ ವಹಿವಾಟುಗಳನ್ನು ಸಹ ನಿಷೇಧಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.ಟೆಹ್ರಾನ್ ಸರ್ಕಾರ ಮತ್ತು ಐಆರ್‌ಜಿಸಿಯನ್ನು ಆರ್ಥಿಕವಾಗಿ ಹತ್ತಿಕ್ಕುವ ಪ್ರಯತ್ನದ ಭಾಗವಾಗಿ ಈ ಸಂಸ್ಥೆಗಳ ವಿರುದ್ಧ ನಿರ್ಬಂಧಗಳನ್ನು ಅಮೆರಿಕ ಮತ್ತಷ್ಟು ಬಿಗಿಗೊಳಿಸಿದೆ. ಇರಾನ್‌ನ ಸೇನೆ ಮತ್ತೆ ಒಗ್ಗೂಡಿಸುವ ಪ್ರಯತ್ನ ತೀವ್ರವಾಗುತ್ತಿರುವ ಈ ಹೊತ್ತಿನಲ್ಲಿ ಶಸ್ತ್ರಾಸ್ತ್ರ ಕಾರ್ಯಕ್ರಮಗಳು, ಭಯೋತ್ಪಾದಕ ಪ್ರಾಕ್ಸಿಗಳು ಮತ್ತು ಪರಮಾಣು ಕಾರ್ಯಕ್ರಮಗಳಿಗೆ ಹಣ ವಂಚನೆಗೊಳಿಸಿ ನೀಡುವುದನ್ನು ಮುಂದುವರೆಸಿದ್ದು, ಈ ಹಿನ್ನೆಲೆ ಅಮೆರಿಕ ಆರ್ಥಿಕ ಒತ್ತಡ ಹೇರುವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ಅಮೆರಿಕ ಮತ್ತು ಇರಾನ್ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ, ಟೆಹ್ರಾನ್ ಪ್ರಮುಖ ಹಾರ್ಮುಜ್ ಜಲಸಂಧಿಯನ್ನು ವಾಸ್ತವಿಕವಾಗಿ ನಿರ್ಬಂಧಿಸಿದೆ. ಈ ಮಾರ್ಗದ ಮೂಲಕ ವಿಶ್ವದ ತೈಲ ಮತ್ತು ಅನಿಲದ ಸುಮಾರು ಐದನೇ ಒಂದು ಭಾಗವು ಹಾದು ಹೋಗುತ್ತದೆ. ಜಾಗತಿಕ ಪೂರೈಕೆ ಕೊರತೆ ಪರಿಹರಿಸುವ ಪ್ರಯತ್ನದಲ್ಲಿ ವಾಷಿಂಗ್ಟನ್ ಮಾರ್ಚ್‌ನಲ್ಲಿ ಇರಾನಿನ ತೈಲದ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿತು ಎನ್ನಬಹುದು.
ಆದರೆ, ಅಂದಿನಿಂದ ಅದು ಮತ್ತೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಇರಾನ್‌ನ ಹೆಚ್ಚಿನ ತೈಲವು ಏಷ್ಯಾಕ್ಕೆ ಸಾಗಣೆಯಾಗುತ್ತಿದ್ದು, ಅದರಲ್ಲಿ ಚೀನಾ ಪ್ರಮುಖ ಆಮದುದಾರ ರಾಷ್ಟ್ರವಾಗಿದೆ. ಬೀಜಿಂಗ್ ಒಟ್ಟಾರೆಯಾಗಿ ಟೆಹ್ರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರರನಾಗಿದೆ. ಈ ವಾರದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರಮುಖ ಮಾತುಕತೆಗಾಗಿ ಬೀಜಿಂಗ್‌ಗೆ ಬರಲಿದ್ದು, ಅದಕ್ಕೂ ಮೊದಲು ಈ ಕ್ರಮವನ್ನು ಕೈಗೊಳ್ಳಲಿದೆ. ಟ್ರಂಪ್ ಬೀಜಿಂಗ್ ಭೇಟಿಯಲ್ಲಿ ಇರಾನ್ ವಿರುದ್ಧ ಅಮೆರಿಕ ಇಸ್ರೇಲ್ ಯುದ್ಧವು ಕೂಡ ಪ್ರಮುಖ ಕಾರ್ಯಸೂಚಿಯಾಗಲಿದ್ದು, ಬೀಜಿಂಗ್‌ನಿಂದ ಟೆಹ್ರಾನ್ ಮೇಲೆ ಹೆಚ್ಚಿನ ಒತ್ತಡ ಹೇರಲು ವಾಷಿಂಗ್ಟನ್ ಪ್ರಯತ್ನಿಸುತ್ತಿದೆ. ಇರಾನ್‌ನ ಮಿಲಿಟರಿ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಅಮೆರಿಕ ಚೀನಾ ಮೂಲದ ಮೂರು ಉಪಗ್ರಹ ಸಂಸ್ಥೆಗಳನ್ನು ನಿಷೇಧಿಸಿದೆ. ಇರಾನ್‌ನ ಶಸ್ತ್ರಾಸ್ತ್ರ ಪೂರೈಕೆಗೆ ಸಹಾಯ ಮಾಡಿದ್ದಕ್ಕಾಗಿ ಯುಎಸ್ ಖಜಾನೆ ಇಲಾಖೆ ಈ ಹಿಂದೆ ಹಲವಾರು ಚೀನಾ ಮತ್ತು ಹಾಂಕಾಂಗ್ ಮೂಲದ ಸಂಸ್ಥೆಗಳನ್ನು ನಿಷೇಧಿಸಿತ್ತು ಎನ್ನಲಾಗಿದೆ.
















