ಮನೆ ಸುದ್ದಿ ಜಾಲ ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

0

ಬೆಂಗಳೂರು: ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕರಾಗಿದ್ದ ಡಿ.ಸಿ.ನಾಗೇಶ್ (64) ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧಾನರಾಗಿದ್ದಾರೆ.

ಬಸವನಗುಡಿಯಲ್ಲಿ ನೆಲೆಸಿರುವ ಅವರು, ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದರು.  ತಮ್ಮ ಫೋಟೋಗ್ರಫಿಯ ಮೂಲಕ ಕನ್ನಡ ಸಿನಿಮಾ ರಂಗದ ಚರಿತ್ರೆಯನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿ ಕೊಡುತ್ತಿದ್ದರು. ಸಿನಿಮಾ ದಿಗ್ಗಜರಾದ ಡಾ.ರಾಜ್​​ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ನಟನೆಯ ಸಾವಿರಾರು ಚಲನ ಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಡಿ.ಸಿ. ನಾಗೇಶ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಬೆಂಗಳೂರು ಪ್ರೆಸ್ ಕ್ಲಬ್ ಸಂತಾಪ ಸೂಚಿಸಿದೆ.

ಹೆಸರಾಂತ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಅವರ ಅಕಾಲಿಕ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್​​ ನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.’ದಶಕಗಳ ಕಾಲ ಸಿನಿಮಾ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಕೊಂಡಿದ್ದ ನಾಗೇಶ್ ಅವರು ಚರಿತ್ರೆಯ ಹಲವು ಕ್ಷಣಗಳನ್ನು ತಮ್ಮ ಕ್ಯಾಮರಾದ ಮೂಲಕ ಸೆರೆ ಹಿಡಿದಿದ್ದರು. ಅವರು ತಮ್ಮ ಫೋಟೋಗ್ರಫಿಯ ಮೂಲಕ ಕನ್ನಡ ಸಿನಿಮಾ ರಂಗದ ಚರಿತ್ರೆಯನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿ ಕೊಡುತ್ತಿದ್ದರು. ಹೀಗೆ ಅವರು ಸಾವಿರಾರು ಚಲನಚಿತ್ರಗಳ ಕ್ಷಣಗಳನ್ನು ಹಿಡಿದಿಟ್ಟವರಾಗಿದ್ದರು ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ಸ್ಮರಿಸಿದ್ದಾರೆ.

ಅವರ ಅಗಲುವಿಕೆಯಿಂದ ಪ್ರತಿಭಾವಂತ ಫೋಟೋಗ್ರಾಫರ್ ಒಬ್ಬರನ್ನು ಕಳೆದುಕೊಂಡಿದ್ದೇವೆ. ಸಿನಿಮಾ ಛಾಯಾಗ್ರಹಣ ಕ್ಷೇತ್ರದಲ್ಲಿ ಅವರೊಂದು ಮಾದರಿ. ನಾಗೇಶ್ ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ನೀಡಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.