ಮನೆ ಸುದ್ದಿ ಜಾಲ ಲೈಂಗಿಕ ದೌರ್ಜನ್ಯ; ರಾಮನಗರ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅರೆಸ್ಟ್‌

ಲೈಂಗಿಕ ದೌರ್ಜನ್ಯ; ರಾಮನಗರ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅರೆಸ್ಟ್‌

0

ಬೆಂಗಳೂರು : ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್​ಮೇಲ್ ಆರೋಪದಲ್ಲಿ ಸಂಬಂಧ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯನನ್ನು ಬೆಂಗಳೂರಿನ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಚಂದ್ರೇಗೌಡ ಬಂಧಿತನಾಗಿದ್ದು, ಈತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೊ ಮಾಡಿಕೊಳ್ಳುತ್ತಿದ್ದ. ನಂತರ ಫೋಟೊ, ವಿಡಿಯೊ ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ತಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಹೇಳಿಕೊಂಡು, ನಕಲಿ ಐಡಿ ಕಾರ್ಡ್‌ ಬಳಸಿಕೊಂಡು ಈತ ಹಲವರಿಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ. ಆರೋಪಿಯ ಮೊಬೈಲ್​​ ಪರಿಶೀಲಿಸಿದಾಗ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೊ, ಫೋಟೊ ಪತ್ತೆಯಾಗಿವೆ. ಗಂಡನಿಂದ ದೂರವಾಗಿದ್ದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಗೆ ನಾನು‌ ಉಪನ್ಯಾಸಕ ಎಂದು ಪರಿಚಯಮಾಡಿಕೊಂಡಿದ್ದ.

ನನಗೆ ಡಿವೋರ್ಸ್ ಆಗಿದ್ದು, ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿ ಆಕೆಯ ಜತೆ ಲೈಂಗಿಕ ಸಂಪರ್ಕ ನಡೆಸಿದ್ದ. ಖಾಸಗಿ ಕ್ಷಣವನ್ನು ವಿಡಿಯೊ ಮಾಡಿಕೊಂಡಿದ್ದ ಚಂದ್ರೇಗೌಡ ಅದನ್ನು ಇಟ್ಟುಕೊಂಡು ಮಹಿಳೆಗೆ ಹೆದರಿಸಿ ಆಕೆಯಿಂದ 5 ಲಕ್ಷ ಹಣ ಪಡೆದಿದ್ದ ಎಂದು ದೂರಲಾಗಿದೆ.

ಸಂತ್ರಸ್ತ ಮಹಿಳೆ ಒಮ್ಮೆ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದ ವೇಳೆ ಆಕೆ ಶಾಕ್​​ ಆಗಿದ್ದು, ಮೊಬೈಲ್​​ನಲ್ಲಿ ಹಲವು ಮಹಿಳೆಯರ ವಿಡಿಯೊ, ಚಾಟಿಂಗ್ ಪತ್ತೆಯಾಗಿತ್ತು. ಹೀಗಾಗಿ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನು ದೂರುದಾರ ಮಹಿಳೆಯನ್ನು ಮದುವೆಯಾಗಿ ನಂಬಿಸಿದ್ದ ಆರೋಪಿ ವಿವಾಹವಾಗಿದ್ದೇನೆ ಎಂದು ನಂಬಿಸಲು ಆಕೆಯ ಕೊರಳಿಗೆ ಅರಿಶಿನದ ಕೊಂಬನ್ನೂ ಕಟ್ಟಿದ್ದ. ಸಂತ್ರಸ್ತೆಯ ಆಧಾರ್​​ ಕಾರ್ಡ್​​ ಕೂಡ ಪಡೆದಿದ್ದ ಈತ ತಾನು ಆಕೆಯ ಗಂಡನೆಂದು ಬಿಂಬಿಸಿ ಮಾಡಿಗೆ ಮನೆಯೊಂದಕ್ಕೆ ಕರಾರು ಪತ್ರವನ್ನೂ ಮಾಡಿಸಿದ್ದ.

ತನ್ನ ತಾಯಿಯನ್ನೂ ಸಂತ್ರಸ್ತೆಯ ಮನೆಯಲ್ಲೇ ಆತ ಬಿಟ್ಟಿದ್ದು, ವರ್ಷಾನುಗಟ್ಟಲೆ ಆಕೆಯ ಆರೈಕೆಯನ್ನು ದೂರುದಾರ ಮಹಿಳೆ ಮಾಡಿದ್ದಾಳೆ ಎನ್ನಲಾಗಿದೆ. ಸಾಲದ್ದಕ್ಕೆ ಸಂತ್ರಸ್ತೆಯ ಮಗಳ ವ್ಯಾಸಂಗ ಸಂಬಂಧಿತ ದಾಖಲಾತಿಗಳನ್ನೂ ಬದಲಾಯಿಸಿ, ತಾನೇ ಮಹಿಳೆಯ ಗಂಡ ಎಂದು ಬಿಂಬಿಸಲು ಹೊರಟಿದ್ದ ಎಂಬ ಆರೋಪ ಕೇಳಿಬಂದಿದೆ.