ಮನೆ ಕಾನೂನು ವೈದ್ಯಕೀಯ ಸಿಬ್ಬಂದಿ ಕೊರತೆ: ಅಮಿಕಸ್‌ ಎತ್ತಿರುವ ವಿಚಾರಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ವೈದ್ಯಕೀಯ ಸಿಬ್ಬಂದಿ ಕೊರತೆ: ಅಮಿಕಸ್‌ ಎತ್ತಿರುವ ವಿಚಾರಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

0

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೂ ಸೇರಿದಂತೆ 16 ಸಾವಿರಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದು, ಇದು ವ್ಯವಸ್ಥೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ, ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ನಿರ್ದೇಶಿಸಬೇಕು ಎಂದು ಪ್ರಕರಣದ ಅಮಿಕಸ್‌ ಕ್ಯೂರಿ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮನವಿ ಮಾಡಿದರು.

ನ್ಯಾಯಾಲಯ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅಮಿಕಸ್‌ ಕ್ಯೂರಿ ಶ್ರೀಧರ ಪ್ರಭು ಅವರು, ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೂ ಸೇರಿದಂತೆ 16,500 ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಇಷ್ಟೊಂದು ದೊಡ್ಡ ಪ್ರಮಾಣದ ಹುದ್ದೆಗಳು ಖಾಲಿ ಬಿದ್ದಿರುವ ಪರಿಣಾಮ, ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ಸೇವೆಯೇ ದುರ್ಲಭವಾಗಿದೆ ಎಂದರು.

ವೈದ್ಯರ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿ ಈ ಹಿಂದೆ ಕಾಯಿದೆ ಜಾರಿಗೆ ತಂದಾಗ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆಗ ರಾಜ್ಯ ಸರ್ಕಾರ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು. ಅಂತೆಯೇ, ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಸಂಬಂಧ ವಿವರವಾದ ತೀರ್ಪು ಕೊಟ್ಟಿತ್ತು ಎಂದು ವಿವರಿಸಿದರು.

ಈಗ ಇದೇ ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ಮಂಜೂರಾತಿ ಹುದ್ದೆಗಳಿಗೆ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ಸೇವೆಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ತಿದ್ದುಪಡಿಗೆ ಒಂದು ಸ್ಪಷ್ಟತೆ ಇಲ್ಲ. ವರ್ತಮಾನದ ಕೊರತೆ ನೀಗಿಸಲು ಸರ್ಕಾರದ ಬಳಿ ಪರ್ಯಾಯ ವ್ಯವಸ್ಥೆ ಇಲ್ಲ. 16 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಹುದ್ದೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನರ್ಸ್‌ಗಳು, ಲ್ಯಾಬ್ ಟೆಕ್ನೀಷಿಯನ್‌ಗಳು, ಡಿ-ಗ್ರೂಪ್ ಹುದ್ದೆಗಳ ನೌಕರರ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿ ಖಾಲಿ ಇವೆ ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ಪೀಠವು ಅಮಿಕಸ್‌ ಕ್ಯೂರಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿದೆ.

‍ಪ್ರಕರಣದ ಹಿನ್ನೆಲೆ: ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರೂ ಸೇರಿದಂತೆ 16 ಸಾವಿರಕ್ಕೂ ಹೆಚ್ಚು ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಡಿ ಗ್ರೂಪ್ ನೌಕರರ ಕೊರತೆ ಇದೆ ಎಂಬ ಬಗ್ಗೆ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ವರದಿಯೊಂದನ್ನು ಬಿಡುಗಡೆ ಮಾಡಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 723 ಎಂಬಿಬಿಎಸ್ ವೈದ್ಯರು, 7,492 ಶುಶ್ರೂಷಕಿಯರು, 1,517 ಲ್ಯಾಬ್ ಟೆಕ್ನೀಷಿಯನ್‌ಗಳು, 1,512 ಫಾರ್ಮಾಸಿಸ್ಟ್‌ಗಳು, 1,752 ಸಹಾಯಕರು 3,253 ಗ್ರೂಪ್ ಡಿ ನೌಕರರೂ ಸೇರಿದಂತೆ 16,500ಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದಲ್ಲಿ ಕೊರತೆ ಇದೆ. ನಗರ ಪ್ರದೇಶಗಳಲ್ಲಿ 245 ಮತ್ತು ಗ್ರಾಮೀಣ ಪ್ರದೇಶದಲ್ಲಿ 209 ಸೇರಿದಂತೆ ಒಟ್ಟು 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

ಹಿಂದಿನ ಲೇಖನಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಡಿ ಕೆ ಶಿವಕುಮಾರ್: ವಿಶೇಷ ಪೂಜೆ ಸಲ್ಲಿಕೆ
ಮುಂದಿನ ಲೇಖನಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಿ: ದಿನೇಶ್