ಮನೆ ಪೌರಾಣಿಕ ಶ್ರೀಕೃಷ್ಣ, ಅರ್ಜುನನ ಗರ್ವಭಂಗ ಮಾಡಿದ ಕಥೆ

ಶ್ರೀಕೃಷ್ಣ, ಅರ್ಜುನನ ಗರ್ವಭಂಗ ಮಾಡಿದ ಕಥೆ

0

ಯಮುನಾ ನದೀತೀರದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರು ಕುಳಿತು ಸಂಭಾಷಿಸುತ್ತಿದ್ದರು. ಶ್ರೀಕೃಷ್ಣನು ಅರ್ಜುನನಿಗೆ, ‘ಕೌರವರೊಂದಿಗೆ ಯುದ್ಧವು ನಿಶ್ಚಿತವಾಗಿದೆ. ಆದರೆ ನೀನು ಹೆದರಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ನಿನ್ನ ಬಳಿ ಶಿವನು ನೀಡಿದ ಪಾಶುಪತಾಸ್ತ್ರ ಇದೆ, ನೀನು ಶ್ರೇಷ್ಠ ಧನುರ್ಧರನೂ ಆಗಿದ್ದಿ’ ಎಂದು ಹೇಳುತ್ತಾನೆ.

ತನ್ನ ಸ್ತುತಿಯಿಂದ ಸಂತುಷ್ಟನಾದ ಅರ್ಜುನನು, ಕೃಷ್ಣನೇ, ಶ್ರೀರಾಮನು ಸಹ ಧನುರ್ಧರನಾಗಿದ್ದನು. ಆದರೆ ಅವನು ಸಾಗರದ ಮೇಲೆ ಯಾಕೆ ಸೇತುವೆಯನ್ನು ಕಟ್ಟಲಿಲ್ಲ? ತನ್ನದೇ ಬಾಣಗಳಿಂದ ಸಾಗರದ ಮೇಲೆ ಸೇತುವೆಯನ್ನು ಕಟ್ಟಬಹುದಿತ್ತಲ್ಲ? ಅದೇನೂ ಅಸಾಧ್ಯವಾದ ಮಾತೇನೂ ಆಗಿರಲಿಲ್ಲ. ನನ್ನ ತಾಯಿ ಗಜಗೌರಿ ವ್ರತವನ್ನು ಮಾಡುತ್ತಿದ್ದಾಗ ಅವಳಿಗೆ ಇಲ್ಲಿಂದ ದೇವಲೋಕದ ತನಕ ಪಯಣಿಸಲು ಬಾಣದ ಸೇತುವೆಯನ್ನು ಕಟ್ಟಿದ್ದೆ. ಅದರ ಮೇಲೆ ಗಜೇಂದ್ರನೇ ಇಳಿದು ಬಂದಿದ್ದನು ಎಂದು ತನ್ನ ಕಾರ್ಯವನ್ನು ಹೊಗಳಿಕೊಂಡನು.

ಅರ್ಜುನನಲ್ಲಿ ಜಾಗೃತವಾದ ಅಹಂಭಾವವನ್ನು ಈಗಲೇ ನಿವಾರಿಸಬೇಕು ಎಂದು ಶ್ರೀಕೃಷ್ಣನು ಒಂದು ಉಪಾಯ ಮಾಡಿದನು. ‘ಅರ್ಜುನಾ, ಆ ಕಾಲದ ಸಾಗರದ ಮೇಲಿನ ಸೇತುವೆಯ ವಿಷಯವನ್ನು ಬಿಟ್ಟುಬಿಡೋಣ, ಈಗ ನೀನು ಈ ಯಮುನೆಯ ಮೇಲೆ ಸೇತುವೆಯನ್ನು ಕಟ್ಟು ನೋಡೋಣ’ ಎಂದನು. ಅರ್ಜುನನು ಒಪ್ಪಿಕೊಂಡನು. ಅದಕ್ಕೇನೂ ಕಷ್ಟವಿಲ್ಲ ಎಂದೆನಿಸಿ ಅರ್ಜುನನು ಬಾಣದ ಸುರಿಮಳೆಯಿಂದ ಸೇತುವೆಯನ್ನು ಕಟ್ಟಿಬಿಟ್ಟನು.

ಅನಂತರ ಶ್ರೀಕೃಷ್ಣನು, ರಾಮನ ಸೈನ್ಯವು ಬಹಳ ದೊಡ್ಡದಿತ್ತು. ಅವರಲ್ಲಿ ನಾಲ್ಕು ಮಂದಿ ಕಪಿಗಳು ಬಹಳ ಶಕ್ತಿಶಾಲಿಗಳಾಗಿದ್ದರು. ಇಂತಹ ಸೇತುವೆಯನ್ನು ಕಟ್ಟಿದ್ದರೆ ಯಾವಾಗಲೋ ಛಿದ್ರವಾಗುತ್ತಿತ್ತು ಎಂದನು. ಆಗ ಅರ್ಜುನನು ಅಹಂಕಾರದಿಂದ, ‘ನಾನು ಕಟ್ಟಿದ ಸೇತುವೆಯ ಮೇಲಿನಿಂದ ಬಲಶಾಲಿ ಐರಾವತವೇ ಇಳಿದು ಬಂದಿರುವಾಗ ಕಪಿಗಳ ಸೈನ್ಯವು ಇದರ ಮೇಲಿನಿಂದ ಹೋಗಲು ಏನು ಕಷ್ಟವಿದೆ? ಈಗ ರಾಮನ ಸೈನ್ಯವೂ ಇಲ್ಲ. ಏಕೆಂದರೆ ಆ ಘಟನೆಯು ತ್ರೇತಾಯುಗದಲ್ಲಿ ನಡೆದಿತ್ತು, ಇದು ದ್ವಾಪರಯುಗವಾಗಿದೆ. ಆದರೆ ಅವರಲ್ಲಿ ಮಾರುತಿಯು ಮಾತ್ರ ಈ ಕಾಲದಲ್ಲಿಯೂ ಇದ್ದಾನೆ, ಏಕೆಂದರೆ ಅವನು ಚಿರಂಜೀವಿಯಾಗಿದ್ದಾನೆ. ಕೃಷ್ಣಾ, ನೀನು ಒಂದು ಬಾರಿ ಕರೆದರೂ ಅವನು ಕೂಡಲೇ ಬಂದುಬಿಡುವನು. ಅವನಿಗೆ ಈ ಸೇತುವೆಯ ಮೇಲೆ ನಡೆದಾಡಲು ಹೇಳಿದರೆ, ಅವನು ನಿನ್ನ ಆಜ್ಞೆಯನ್ನು ಉಲ್ಲಂಘಿಸುವುದಿಲ್ಲ’ ಎಂದು ಹೇಳಿದನು. ಕೃಷ್ಣನು ಕೂಡಲೇ ‘ಮಾರುತೀ…’ ಎಂದು ಕರೆದನು. ತಕ್ಷಣವೇ ಹಾರಿಕೊಂಡು ಮಾರುತಿಯು ಅಲ್ಲಿಗೆ ಬಂದನು. ಶ್ರೀಕೃಷ್ಣನಿಗೆ ನಮಸ್ಕರಿಸಿ, ಆಜ್ಞೆ ನೀಡಿ ಸ್ವಾಮಿ ಎಂದನು.

ಶ್ರೀಕೃಷ್ಣನು ಮಾರುತಿಗೆ ಈ ಬಾಣಗಳ ಸೇತುವೆಯ ಮೇಲಿನಿಂದ ಯುಮುನೆಯನ್ನು ದಾಟಬೇಕು ಎಂದನು. ಆ ಮಾತನ್ನು ಕೇಳಿ ಮಾರುತಿಯು ಒಂದು ಕ್ಷಣ ಸ್ತಬ್ದನಾದನು. ‘ನಾನು ಇಷ್ಟೊಂದು ಬಲಶಾಲಿ, ನನ್ನ ಭಾರದಿಂದ ಸೇತುವೆಯು ಮುರಿದರೆ ಏನು ಮಾಡುವುದು’ ಎಂದು ಒಂದು ಕ್ಷಣ ಚಿಂತಿಸಿದರೂ ಶ್ರೀಕೃಷ್ಣನ ಆಜ್ಞೆಯನ್ನು ಶಿರಸಾ ವಹಿಸಿ, ಪ್ರಭು ಶ್ರೀರಾಮಚಂದ್ರನನ್ನು ನೆನೆಸಿಕೊಂಡನು ಮತ್ತು ‘ಜೈ ಶ್ರೀರಾಮ’ ಎಂದು ಹೇಳಿ ತನ್ನ ಒಂದು ಕಾಲನ್ನು ಎತ್ತಿ ಸೇತುವೆಯ ಮೇಲೆ ಇಟ್ಟನು. ಇಡೀ ಸೇತುವೆಯೇ ಕಟಕಟನೆ ಮುರಿದುಬಿತ್ತು. ಛಿದ್ರಗೊಂಡ ಬಾಣಗಳೆಲ್ಲ ಯುಮನೆಯಲ್ಲಿ ಮುಳುಗಿ ಹೋದವು. ಕೆಲವು ಪ್ರವಾಹದೊಂದಿಗೆ ಮುಂದೆ ಮುಂದೆ ತೇಲಿ ಹೋಗತೊಡಗಿದವು.

ಇದೆಲ್ಲವನ್ನೂ ನೋಡುತ್ತಿದ್ದ ಅರ್ಜುನನ ಮುಖವು ಕಳೆಗುಂದಿತು. ಅವನ ಅಹಂಕಾರವೂ ಆ ಸೇತುವೆಯಂತೆಯೇ ಕುಸಿದು ನಿರ್ನಾಮವಾಯಿತು. ಲಜ್ಜಿತನಾದ ಅರ್ಜುನನು ಶ್ರೀಕೃಷ್ಣನಿಗೆ, ‘ವಾಸುದೇವ, ನನ್ನನ್ನು ಕ್ಷಮಿಸು, ವಜ್ರ ಶರೀರದ ಆಂಜನೇಯನ ಬಲವನ್ನು ನಾನು ತಿಳಿದುಕೊಂಡಿರಬೇಕಾಗಿತ್ತು. ನಾನು ತನಗೆ ಸರಿಸಾಟಿ ಯಾರೂ ಇಲ್ಲ ಎಂಬ ಗುಂಗಿನಲ್ಲಿದ್ದೆ. ಭಕ್ತಿರಹಿತ ಕಾರ್ಯ ವ್ಯರ್ಥ’ ಎಂದು ತಪ್ಪೊಪ್ಪಿಕೊಂಡನು.