ಮನೆ ಪೌರಾಣಿಕ ಸೂರ್ಯರಥ ಪರಿವಾರ

ಸೂರ್ಯರಥ ಪರಿವಾರ

0

      ಈ ವಿಧವಾಗಿ ಜ್ಯೋತಿರ್ಮಯನಾದ ಹಿರಣ್ಯಗರ್ಭ ಸೂರ್ಯನಾರಾಯಣನು ಉತ್ತರಾಯಣ ದಕ್ಷಿಣಾಯನಗಳಲ್ಲಿ ಸಂಚರಿಸುತ್ತಿದ್ದಾಗ ಸೂರ್ಯನ ಸ್ಯಂದನವು ಒಂದೊಂದು ಆಯನದಲ್ಲಿಯೂ ನೂರ ಎಂಭತ್ತು ಮಂಡಲಗಳಂತೆ ಒಟ್ಟು ಮುನ್ನೂರ ಅರವತ್ತು ಮಂಡಲ ಗತಿಗಳಲ್ಲಿ ಮುಂದೆ ನಡೆಯುತ್ತಿದೆ. ಜ್ಯೋತಿಶ್ಚಕ್ರದಲ್ಲಿ ಬೃಹತ್‌ ರಥ ಮಧ್ಯಗತನಾದ ಸೂರ್ಯನೊಂದಿಗೆ ಸೇರಿ ಆತನ ಪರಿವಾರ ಸಮಸ್ತವೂ ಹಿಂಬಾಲಿಸಿಕೊಂಡು ಬರುತ್ತದೆ. ಹದಿನಾರು ಅಪ್ಸರೆಯರು ಆತನಿಗೆ ಅಭಿಮುಖವಾಗಿದ್ದು ಶ್ರೀ ಮಹಾವಿಷ್ಣುವಿನ ಮಹಿಮೆಯನ್ನು ರಮಣೀಯವನ್ನಾಗಿ ಅಭಿನಯಿಸುತ್ತಾ ನಾಟ್ಯವನ್ನು ಪ್ರದರ್ಶಿಸುತ್ತಾರೆ. ಮಹಿಮಾನ್ವಿತರಾದ ಭಕ್ತಾಗ್ರೇಸರರೂ, ಮಹರ್ಷಿ ಮಂಡಲವೂ ವಿಷ್ಣುನಾಮ ಸಂಕೀರ್ತನೆಯನ್ನು ಮಾಡಿ ಅಪೂರ್ವವಾದ ಭಕ್ತಿಪರವಶದಲ್ಲಿ ತನ್ಮಯರಾಗುತ್ತಾರೆ. ಶ್ರುತಿಯುಳ್ಳ ಸ್ವರಗಳನ್ನು ಸುಲಲಿತವಾಗಿ ಹೇಳುವ ಗಂಧರ್ವರ ಮನೋಹರ ಗಾನ ಶ್ರವಂತಿಗಳು ಹರಿದು ಬರುತ್ತವೆ. ರಾಕ್ಷಸಗಣವೆಲ್ಲಾ ಆ ರಥದ ಸೋಪಾನಗಳ ಮೇಲೆ ವಿನಮ್ರತೆಯಿಂದ ನಿಂತು ಆತನ ಕಣ್ಣ ಸಂಜ್ಞೆಯಲ್ಲಿ ನಡೆಯುತ್ತಾರೆ. ಅಶ್ವಗಳನ್ನು ನಿಲ್ಲಿಸಿ ಅವುಗಳಿಗೆ ಹೊದಿಕೆಗಳನ್ನು ಹೊದಿಸಿ ರಥವನ್ನು ಸರ್ವಾಂಗ ಸುಂದರವಾಗಿ ಅಲಂಕರಿಸುವುದಕ್ಕಾಗಿ ಸರ್ಪರಾಜರು, ಹಗ್ಗಗಳನ್ನು ಹಿಡಿದುಕೊಳ್ಳುವುದಕ್ಕೆ ಯಕ್ಷ ಪ್ರಮುಖರು ಇರುತ್ತಾರೆ. ಹನ್ನೆರಡು ಜನ ಆದಿತ್ಯರು ನಿರ್ದಿಷ್ಟ ಸಮಯಗಳಲ್ಲಿ ರಥವನ್ನು ಪ್ರವೇಶಿಸಿ ಈ ಪರಿವಾರಕ್ಕೆ ಅಧಿಪತ್ಯವನ್ನು ವಹಿಸುತ್ತಾರೆ. ಈ ಏಳು ದೇವತೆಗಳು ಸೂರ್ಯ ಶತಾಂಗವರ್ತಿಗಳಾಗಿ ನಿಂತು ಶೀತೋಷ್ಣಗಳನ್ನು ಮಳೆಯನ್ನು ಆಯಾ ಋತುಗಳನ್ನನುಸರಿಸಿ ವರ್ತಿಸುವಂತೆ ಧರ್ಮಪರಿಪಾಲನೆಯನ್ನು ಮಾಡುತ್ತಾರೆ. ಸೂರ್ಯರಥವನ್ನು ಎಲ್ಲಾ ಸಮಯಗಳಲ್ಲಿಯೂ ಪರ್ಯಾವರಿಸಿ ಅಂಗುಷ್ಟ ಮಾತ್ರ ದೇಹವುಳ್ಳ ವಾಲಖಿಲ್ಯ ಮುನಿಗಳು ವಿಷ್ಣುನಾಮವನ್ನು ಧ್ಯಾನಿಸುತ್ತಾ ಯಾನ ಮಾರ್ಗಕ್ಕೆ ಉತ್ಸವ ಸಂಭಕವನ್ನುಂಟುಮಾಡುತ್ತಾರೆ.

        ಮಧುಮಾಸದಲ್ಲಿ ಆದಿತ್ಯ ಧಾತ್ರಿಯ ಅಧಿಪತ್ಯದಲ್ಲಿ ಪುಲಸ್ತ್ರ, ಮಹರ್ಷಿ, ಗಾನವಿದ್ಯಾ ಪ್ರವೀಣನಾದ ಗಂಧರ್ವಶಿಖಾಮಣಿ ತುಂಬುರನು, ಅಪ್ಪರೆ, ಕ್ರತುಸ್ಥಲ, ಯಕ್ಷನಾಯಕನಾದ ರಥಕ್ರತು, ಸರ್ಪರಾಜನಾದ ವಾಸೂಕಿ, ಹೇತೀರಾಕ್ಷಸನು ಸೂರ್ಯರಥದಲ್ಲಿರುತ್ತಾರೆ.

       ಮಾಧವ ಮಾಸದಲ್ಲಿ ಸಹಸ್ರಾಂಶು ವಾಹನದಲ್ಲಿ ಆರ್ಯಮಂತನ ಅಧಿಪತ್ಯದಲ್ಲಿ ಪುಲಹ ಮಹರ್ಷಿ, ನಾರದ, ಅಪ್ಸರ ಕಾಂತ ಪುಂಜಿಕಸ್ಥಲೀ, ಯಕ್ಷಪತಿ ರಥೋಜನು, ಕಚನೀರಸರ್ಪ, ಅಸುರಪತಿ ಪ್ರಹೇತಿಗಳಿರುತ್ತಾರೆ.

     ಶುಚೀಮಾಸದಲ್ಲಿ ಮಿತ್ರನು ಸ್ಯಂದನಾಧಿಪತಿಯಾಗಿರುತ್ತಾನೆ. ದ್ಯುಮಣೀರಥದಲ್ಲಿ ಅತ್ರಿ ಮಹರ್ಷಿ, ಹಾಹಾಗಂಧರ್ವನು, ದೇವವೇಶ್ಯೆ ಮೇನಕೆ, ಯಕ್ಷಮೌಳೀ ರಥಸ್ವನನು, ಭುಜಗಾಧ್ಯಕ್ಷನಾದ ತಕ್ಷಕನು, ಪೌಶುಪೇಯ ದೈತ್ಯನೂ ರಥದಲ್ಲಿರುವರು.

        ಶುಕ್ರ ಮಾಸದಲ್ಲಿ ಆದಿತ್ಯ ವರುಣನ ಅಧಿಪತ್ಯದಲ್ಲಿ ವಸಿಷ್ಠ ಮಹರ್ಷಿ, ಹೋಹೋ ಗಂಧರ್ವ, ಅಪ್ಪರೆ ಸಹಜನ್ಯ, ಯಕ್ಷಶ್ರೇಷ್ಠ ರಥಚಿತ್ರನು. ನಾಗರಾಜನಾದ ನಾಗನು, ಬುಧ ರಾಕ್ಷಸನು ಕಮಲಾಪ್ತನ ರಥದಲ್ಲಿ ಪ್ರಯಾಣಿಸುತ್ತಾರೆ.

ನಭೋ ಮಾಸದಲ್ಲಿ ಅಹರ್ಪತಿಯ ವಾಹನವು ಇಂದ್ರನ ಅಧಿಪತ್ಯದಲ್ಲಿ ನಡೆಯುತ್ತದೆ. ರಥಗತರಾಗಿ ಅಂಗೀರಸ ಮುನಿಗಳು, ವಿಶ್ವಾವಸು ಗಂಧರ್ವನು, ದೇವವೇಶ್ಯೆ ಪ್ರಮ್ಲೋಚನಾ, ಯಕ್ಷನಾದ ಸ್ರೋತಸ್ಸು, ಏಲಾಪತ್ರ ಫಣೀ. ಅದೇ ಹೆಸರನ್ನುಳ್ಳ ಏಲಾಪತ್ರ ರಾತ್ರಿಂಚರನು ಇರುವರು.

        ನಭಸ್ಯ ಮಾಸದಲ್ಲಿ ವಿವಸ್ತ್ರದಾದಿತ್ಯನ ಅಧಿಪತ್ಯದಲ್ಲಿ ವಿಕರ್ತನ ರಥವನ್ನು ಭ್ರಗು ಮಹರ್ಷಿ, ಉಗ್ರಸೇನ ಗಂಧರ್ವನು, ಅಪ್ಪರೆ ಅನುಮ್ಲೋಚನಾ, ಯಕ್ಷ ವತಂಸನು, ಆಪೂರಣನು, ವಾತಾಕನಪತಿ ಶಂಖಪಾಲನು, ವ್ಯಾಘ್ರ ದೈತ್ಯೇಯನು ಇರುವರು.

        ಇಷಾಮಾಸದಲ್ಲಿ ಖಗವಾಹನಕ್ಕೆ ಪೂಷಾಧಿಪತ್ಯನು ಅಧಿಪತಿ. ವಾಹನಗತರಾಗಿ ಗೌತಮ ಮಹರ್ಷಿ, ಸುರುಚಿ ಗಂಧರ್ವನು, ಅಪ್ಸರೋಲಲಾಮ ಘೃತಾಚಿ, ಯಕ್ಷಸುಷೇಣನು, ಪಾಪರೇಣು ಧನಂಜಯನು, ಯಾತುಧಾನರ ಅಧಿಪತಿ ವಾತನೂ ಇರುವರು.

      ಊರ್ಜಮಾಸದಲ್ಲಿ ಆದಿತ್ಯ ಪದದೊಳಕ್ಕೆ ಪರ್ಜನ್ಯನು ಪ್ರವೇಶಿಸಿ ಅಧಿಪತ್ಯವನ್ನು ಸ್ವೀಕರಿಕಸುತ್ತಾನೆ. ದಿವಾಕರ ಸ್ಯಂದನದಲ್ಲಿ ಭರದ್ವಾಜ ಮಹರ್ಷಿ, ನಭೋಮಾಸದಲ್ಲಿನ ವಿಶ್ವಾವಸು ಗಂಧರ್ವನ ಹೆಸರನ್ನುಳ್ಳ ಮತ್ತೊಬ್ಬ ವಿಶ್ವಾವಸು ಗಂಧರ್ವನಾಗಿ ಅಪ್ಸರೆ ವಿಶ್ವಾಚಿ, ಸೇನಜಿಧ್ಯಕ್ಷನು, ಐರಾವತ ಸರ್ಪ, ಚಾಪರಾಕ್ಷಸನು ಪ್ರವೇಶಿಸುವರು.

     ಸಹೋಮಾಸದಲ್ಲಿ ಆದಿತ್ಯ ಸ್ಥಾನವನ್ನು ಅಂಶುಮಂತನು ಸ್ವೀಕರಿಸಿ ರಥ-ನೇತೃತ್ವವನ್ನು ವಹಿಸುತ್ತಾನೆ ದಿನಾಧಿಪನ ರಥದಲ್ಲಿ ಕಶ್ಯಪ ಮಹರ್ಷಿ, ಚಿತ್ರಸೇನ ಗಂಧರ್ವನ್ನು, ಊರ್ವಶಿ ಅಪ್ಸರೆ, ತಾರಾಕ್ಷ್ಯನು ಯಕ್ಷಪತಿಯಾಗಿ, ಮಹಾಪದ್ಮ ಚಕ್ಷುಶ್ರವ, ವಿದ್ಯಾದ್ರಾಕ್ಷಕನು ಪರಿವಾರರಾಗಿರುತ್ತಾರೆ.

      ಸಹಸ್ಯಮಾಸದಲ್ಲಿ ಭಗು ಆದಿತ್ಯಾಧಿಪತಿಯಾಗುತ್ತಾನೆ. ಅವನ ಅಧಿಪತ್ಯದಲ್ಲಿ ಅಹಸ್ಕರನ ರಥದಲ್ಲಿ ಕತು ಮಹರ್ಷಿ ಗಂಧರ್ವಪತಿ ಊರ್ಣಾಯುವು, ದೇವವೇಶ್ಯೆ ಪೂರ್ವಚಿತ್ತ, ಯಕ್ಷರಾಜನಾದ ಅರಿಷ್ಕನೇಮಿ ಸರ್ಪಕುಲ ಶ್ರೇಷ್ಠ ಕರ್ಕಟಕನು ಸಹಾಯಗಣರಾಗಿ ನಿಲ್ಲುತ್ತಾರೆ.

      ತಪೋಮಾಸದಲ್ಲಿ ತ್ವಷ್ಟನಿಗೆ ಆದಿತ್ಯಾಧಿಪತಿಯ ಪದವಿಯು ಲಭಿಸುತ್ತದೆ. ಅವನ ಅಧಿಪತ್ವದಲ್ಲಿ ಭಾಸ್ಕರ ವಾಹನವನ್ನು ಜಮದಗ್ನಿ ಮಹರ್ಷಿ, ಧೃತರಾಷ್ಟ್ರ ಗಂಧರ್ವ, ದೇವಕಾಂತೆ, ತಿಲೋತ್ತಮೆ, ಯಕ್ಷ ಋತಜಿತ್ತು, ಕಂಬಳ ದರ್ವಿಕರ, ಬ್ರಹ್ಮಪೇತ ರಾಕ್ಷಸನು ಅನುಚರ ವರ್ಗವಾಗಿರುತ್ತಾರೆ.

       ತಪಸ್ಯಮಾಸದಲ್ಲಿ ಶ್ರೀ ಮಹಾವಿಷ್ಣು ಆದಿತ್ಯಪದವಿಯಲ್ಲಿದ್ದು ಆಧಿಪತ್ಯವನ್ನು ವಹಿಸುತ್ತಾನೆ. ವಿಶ್ವಾಮಿತ್ರ ಮಹರ್ಷಿ, ಗಂಧರ್ವ ಸೂರ್ಯವರ್ಚಸ್ವಿ, ದೇವವನಿತೆ ರಂಭ, ಯಕ್ಷೇಶನಾದ ಸತ್ಯಜಿತ್ತು, ಅಶ್ವತರ ಸರ್ಪ, ಯಜ್ಞಾಪೇತ ರಾಕ್ಷಸನು ಸೂರ್ಯರಥಯಾನಕ್ಕೆ ಸಹಕರಿಸುತ್ತಾರೆ. ಎಂದು ಈ ವಿಧವಾಗಿ ಲೋಕಾಭಿರಾಮನಾದ ಸೂರ್ಯನಾರಾಯಣನ ದಿವ್ಯ ಸ್ವರೂಪವನ್ನು ತನ್ಮಯನಾಗಿ ವರ್ಣಿಸಿದ ಪರಾಶರ ಮುನಿಗಳ ವಾಕ್ಯಗಳನ್ನು ಅಮಿತವಾದ ಆಶ್ಚರ್ಯದಿಂದ ಕೇಳುತ್ತಿದ್ದ ಮೈತ್ರೇಯನು ಪರಾಶರರೊಂದಿಗೆ “ಮುನಿಕುಲೋತ್ತಮಾ! ನೀವು ಇಲ್ಲಿಯವರೆಗೂ ನನಗೆ ಕಾಲಾತ್ಮಕನಾದ ಸೂರ್ಯ ಭಗವಾನನ ಮಹಿಮೆಯನ್ನು ವಿವರವಾಗಿ ವಿವರಿಸಿದಿರಿ. ಅಷ್ಟೇ ಅಲ್ಲದೇ ಸೂರ್ಯ ಶತಾಂಗಕ್ಕೆ ಜೋಡಿಸಲ್ಪಟ್ಟ ಕಾಲಚಕ್ರವು ಋತುಗಳನ್ನುಂಟು ಮಾಡುತ್ತಿದೆಯೆಂದು ಸೂರ್ಯ ರಥದಲ್ಲಿನ ಪರಿವಾರವು ಋತು ಧರ್ಮಗಳನ್ನು ಉಂಟುಮಾಡುತ್ತಿದೆಯೆಂದು ಹೇಳಿದಿರಿ. ಈ ವಿಷಯಗಳನ್ನು ಸಮನ್ವಯಿಸಿ ನೋಡಿದರೆ ನನಗೊಂದು ಸಂದೇಹವುಂಟಾಗುತ್ತಿದೆ. ಜ್ಯೋತಿಶ್ಚಕ್ರದಲ್ಲಿ ಸೂರ್ಯನು ಇರುವುದರಿಂದ ಪ್ರಯೋಜನವೇನು? ಅವನಿಗೆ ಇರುವ ಕರ್ತವ್ಯವೇನು? ಎಲ್ಲಾ ಕಾರ್ಯಗಳನ್ನೂ, ರಥಚಕ್ರವೂ, ಪರಿವಾರವು ನಿರ್ವಹಿಸುತ್ತಿದ್ದರೆ ಆತನ ಮಹಿಮೆಯೇನಿದೆ? ಎಂಬುದನ್ನು ದಯವಿಟ್ಟು ನನಗೆ ತಿಳಿಸಿರಿ” ಎಂದು ಪ್ರಾರ್ಥಿಸಿದನು. ಮೈತ್ರೇಯನ ಪ್ರಶ್ನೆಯನ್ನು ಕೇಳಿ ಪರಾಶರರು ತಮ್ಮ ಶಿಷ್ಯನ ಮುಖದಲ್ಲಿನ ಜಿಜ್ಞಾಸೆಯನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸಿದನು. ಶಿಷ್ಯನ ಮನಸ್ಸಿನಲ್ಲಿ ಉದಯಿಸಿದ ಈ ಸಂದೇಹವು ತಾನು ಮುಂದೆ ಹೇಳುವ ವಿಷಯಕ್ಕೆ ನಾಂದಿಯೆಂದು ಭಾವಿಸಿ ಆತನ ಕಣ್ಣುಗಳಲ್ಲಿ ದಯಾಮಿಳಿತವಾದ

ಸ್ಫೂರ್ತಿಯು ತುಂಬಿ ತುಳುಕುತ್ತಿತ್ತು. ಪ್ರಸನ್ನಚಿತ್ತದೊಂದಿಗೆ, ಮೃದು ವಚನಗಳಲ್ಲಿ ಶ್ರೀಕರನಾದ ವಿಷ್ಣು ಮಹಿಮೆಯನ್ನು ವರ್ಣಿಸುತ್ತಾ ಆತನು ತನ್ನ ಕಥೆಯನ್ನು ಮುಂದುವರೆಸಿದನು.

       ಮತ್ತೆ ಪರಾಶರರು ”ಮಗೂ! ಆಕಾಶ ಮಂಡಲಾಂತರ್ಗತನಾದ ಸೂರ್ಯನಾರಾಯಣನು ಸ್ವಯಂ ಪ್ರಕಾಶ ಮೂರ್ತಿಯಲ್ಲಿ ಶ್ರೀ ಹರಿಯ ಕರುಣಾ ಪ್ರಸಾದವೇ ಆತನ ಪ್ರಕಾಶಮಾನಕ್ಕೆ ಕಾರಣ. ಕೋಣೆಯ ಒಳಗೆ ಬೆಳಗಿಸಿದ ದೀಪವು ಎಷ್ಟೇ ಚಿಕ್ಕದಾದರೂ ಸುತ್ತಲೂ ಆವರಿಸಿರುವ ಕತ್ತಲನ್ನು ಹೋಗಲಾಡಿಸುತ್ತದೆ. ಅರಣ್ಯದಲ್ಲಿನ ಕಾಡ್ಲಿಚ್ಚಿಗೆ ಹೋಲಿಸಿದರೆ ಗೃಹ ದೀಪಕಾಂತಿಯು ಅದರಲ್ಲಿನ ಸಹಸ್ರಾಂಶದಲ್ಲಿ ಒಂದು ಅಂಶವೂ ಸಹ ಇರುವುದಿಲ್ಲ.

ಸಪ್ತಾಶ್ವ ರಥವನ್ನು ಅಧಿರೋಹಿಸಿ ಸಪ್ತಗಣಗಳೂ ಪರಿವೇಷ್ಠಿಯಾಗಿರಲು ಗಗನಾಂತರಾಳದಲ್ಲಿ ಬೆಳಕನ್ನು ಚೆಲ್ಲುತ್ತಾ ಪಯಣಿಸುವ ವಿಕರ್ತನು ವಾಸುದೇವನಿಂದ ತೇಜೋಧಿಕ್ಯವನ್ನು ಸಂತರಿಸಿಕೊಂಡು ಹೊಳೆಯುತ್ತಿದ್ದಾನೆ. ನಿರುಪನುಮಾನವಾಗಿ ಬೆಳಗುವ ಆತನ ಕಾಂತಿಯು ಶ್ರೀಹರಿಯ ದಿವ್ಯಕಾಂತಿಯಲ್ಲಿ ಅಲ್ಪ ಭಾಗವೂ ಸಹ ಅಲ್ಲ. ಆದಿಯಲ್ಲಿ ನಾರಾಯಣಾಂಶದಿಂದ ವೇದ ಮಧುಕೋಶವು ಉದಯಿಸಿ ಸೂರ್ಯನ ಮೂಲಕ ಪ್ರಕಟ ರೂಪವನ್ನು ಪಡೆದಿದೆ. ಪ್ರಾತಃ ಕಾಲದಲ್ಲಿ ಋಗ್ವೇದವು ಸೂರ್ಯನಿಂದ ದೀದಿತಿಯನ್ನು ಗ್ರಹಿಸಿ ಪ್ರಕಾಶಮಾನವಾಗುತ್ತದೆ. ಮಧ್ಯಾಹ್ನದ ವೇಳೆಯಲ್ಲಿ ಯಜುರ್ಮಂತ್ರಗಳು ದೀಪ್ತಿಮಂತವಾಗಿ ಇರುತ್ತವೆ. ಅಪರಾಹ್ನದಲ್ಲಿ ಸೂರ್ಯತೇಜದಿಂದ ಬೃಹದ್ರಥಂತರಾದಿ ಸಾಮಗಳು ಬೆಳಗುತ್ತವೆ. ಪರಿವಾರ ಪರೀವೃತನಾದ ಮಾತ್ರಕ್ಕೆ ಪ್ರಭಾಕರನ ಮಹಿಮಾನ್ಯತೆಯು ತನ್ನ ಗುರುತ್ವವನ್ನು ಕಳೆದುಕೊಳ್ಳುವುದಿಲ್ಲ. ಶ್ರೀಹರಿಯ ವೈಭವಕ್ಕೆ ನಾಮಧೇಯ ಸಾಕ್ಷಿಯಾದ ಆತನಿಂದಲೇನೇ ಅಖಂಡವಾದ ಕಾಲಸ್ವರೂಪವು ಅಖಂಡವಾಗಿ ವಿದ್ಯೋತಿಸಿ (ಬೆಳಗಿ) ಮತ್ತೆ ಶ್ರೀ ಹರಿಯನ್ನೇ ಅಭಿವ್ಯಂಜಿಸುವಂತೆ ಮಾಡುತ್ತದೆ. ಸೂರ್ಯ ಮಂಡಲದಿಂದ ಉತ್ಪಾದಿತವಾದ ಕಾಂತಿಕಿರಣಗಳು ಅನರತಮುಖವಾಗಿ ಹೊರಟು ಬ್ರಹ್ಮಾಂಡದಾಂತರಾಳದೊಳಕ್ಕೆ ಅನೇಕ ರೂಪಗಳಲ್ಲಿ ಪ್ರಸರಿಸುತ್ತಿವೆ. ಈ ಕರಣ ರಾಶಿಯಲ್ಲಿ ಪ್ರಭೂತವಾದ ಅನೇಕ ತೇಜಗಳೂ ಸಹ ಇವೆ. ಸೂರ್ಯಕಿರಣಾವಿರ್ಭೂತವಾದ ತೇಜಗಳಲ್ಲಿ ಸುಷುಮ್ನ ತೇಜ ಶೀತಾಂಶುಮಂಡಲಕ್ಕೆ ಪ್ರಯಾಣಿಸಿ ಚಂದ್ರನಿಗೆ ಅಮೃತಾಂಶವನ್ನುಂಟು ಮಾಡುತ್ತದೆ.

      ಇದಲ್ಲದೇ ಇನ್ನೂ ಆವಿರ್ಭವಿಸಿದ ತೇಜಗಳಲ್ಲಿ ಹರಿಕೇಶತೇಜ ನಕ್ಷತ್ರ ಮಂಡಲಕ್ಕೂ ವಿಶ್ವಕರ್ಮತೇಜವು ಬುಧ ಮಂಡಲಕ್ಕೂ, ವಿಶ್ವಕಾರ್ಯತೇಜವು ಶುಕ್ರ

ಮಂಡಲಕ್ಕೂ, ಸಂಪದಸುತ್ತೇಜವು ಅಂಗಾರಕ ಮಂಡಲಕ್ಕೂ ಆರ್ವಾವಸುತೇಜಸ್ಸು ಬೃಹಸ್ಪತೀ ಮಂಡಲಕ್ಕೂ, ಸ್ವರಾಟ್ ತೇಜಸ್ಸು ಶನೀಮಂಡಲಕ್ಕೂ ತೇಜೋ ರೂಪದಲ್ಲಿ ಪ್ರಯಾಣಿಸಿ ಕಾಂತುಷ್ಟಗಳನ್ನು ಉಂಟುಮಾಡುತ್ತಿವೆ. ಸುಷುಮ್ಮ ತೇಜಸ್ಸಿನಲ್ಲಿ ಹೇರಳವಾಗಿ ಅಮೃತವನ್ನು ಸ್ವೀಕರಿಸಿ, ಸುಧಾಕರ ಮಂಡಲವು ಶುಕಪಕ್ಕದಲ್ಲಿ ದಿನೇದಿನೇ ಪ್ರವರ್ಧಮಾನವಾಗಿ ಕಾಂತಿಯನ್ನು ಚೆಲ್ಲುತ್ತದೆ. ಶುಕ್ಲಪಕ್ಷ ಸುಧಾಂಶನ ಬೆಳಕು ಲೋಕಗಳಿಗೆ ತಾಪಶಾಂತಿಯನ್ನು, ತಂಪನ್ನು ಪ್ರಸಾದಿಸುತ್ತದೆ. ಕೃಷ್ಣ ಪಕ್ಷವು ಬರುತ್ತಲೇ ಚಂದ್ರಕಿರಣಗಳಲ್ಲಿನ ಅಮೃತವನ್ನು ದೇವತೆಗಳು ಭುಜಿಸುತ್ತಾರೆ. ಅದರಿಂದಲೇ ಚಂದ್ರನ ಕಾಂತಿಯು ಕ್ಷಣಕ್ಷಣವೂ ಕ್ಷೀಣಿಸಿ ಅಮಾವಾಸ್ಯದ ದಿನಕ್ಕೆ ನಿಶೇಷವಾಗುತ್ತದೆ. ಅಮೃತಸಾರವಾದ ಚಂದ್ರಜ್ಯೋತ್ಸಗಳಿಂದ ದೇವತೆಗಳಿಗೆ ತಿಂಗಳಲ್ಲಿ ಅರ್ಧಭಾಗ ಪರಿತೋಷವುಂಟಾಗುತ್ತದೆ. ಪಕ್ಷದ್ವಯವು ಕಳೆದು ಉಳಿದ ಎರಡು ದಿನಗಳಲ್ಲಿ ಶೀತಕಿರಣನ ಮಯೂಖಗಳನ್ನು ಪಿತೃ ದೇವತೆಗಳು ಭುಜಿಸುತ್ತಾರೆ.

 ಚಂದ್ರನ ಮಂಡಲ

       ಸೂರ್ಯರಥದಂತೆಯೇ ಜ್ಯೋತಿಶ್ಚಕ್ರದಲ್ಲಿ ಪರಿಭವಿಸುತ್ತಿರುವ ಚಂದ್ರನಿಗೂ ಸಹ ಮಹಾ ಪ್ರಮಾಣವಾದ ದಿವ್ಯರಥವಿದೆ. ಚಂದ್ರನ ರಥಕ್ಕೆ ಕಟ್ಟಿದ ಅಚ್ಚುಗಳಿಗೆ ಮೂರು ಚಕ್ರಗಳಿವೆ. ರಥದ ಕಾಡ ಮರದ ಎರಡೂ ಕಡೆಗಳಲ್ಲಿ ಐದು ಕುದುರೆಗಳಂತೆ ಒಟ್ಟು ಹತ್ತು ಕುದುರೆಗಳು ಇರುತ್ತವೆ. ಇವು ಮಲ್ಲಿಗೆ ಹೂವುಗಳಿಗಿಂತಲೂ ಬೆಳ್ಳನೆಯ ಹೊಳೆಯುವಂತಹ ಕುದುರೆಗಳು. ನಕ್ಷತ್ರ ಬೀದಿಗಳಲ್ಲಿ ಪರ್ಯಟಿಸುವ ಚಂದ್ರರಥವನ್ನು ಸೂರ್ಯಶತಾಂಗದಂತೆಯೇ ವಾಯುನಾಳಗಳೊಂದಿಗೆ ಬಂಧಿಸಿ ಧ್ರುವನು ತನ್ನ ಕೈಯಿಂದ ದೃಢವಾಗಿ ಹಿಡಿದುಕೊಂಡು ಮಂಡಲಾಕಾರದಲ್ಲಿ ಸುತ್ತುತ್ತಿದ್ದಾನೆ. ಜ್ಯೋತ್ಪಾಕರನ ರಥವೂ ಆಶ್ಚಗಳೂ ಎರಡೂ ಕೂಡಾ ಉದ ಗರ್ಭದೊಳಗಿನಿಂದ ಉದ್ಭವಿಸಿವೆ. ಇವು ಕಲ್ಪಾವಧಿಯವರೆಗೂ ಜೀವಿಸಿ ಕಲ್ಪಾಂತದಲ್ಲಿ ಉಳಿದ ಜೀವಿಗಳೊಂದಿಗೆ ಲಯವನ್ನು ಹೊಂದುತ್ತವೆ. ಕೃಷ್ಣಪಕ್ಷದ ಕೊನೆಯ ದಿನದಂದು ಚಂದ್ರನ ಹದಿನೈದನೆಯ ತೇಜವನ್ನು ಪಿತೃ ದೇವತೆಗಳು ಪಾನ ಮಾಡಿ ಸಂತೃಷ್ಟಿಯನ್ನು ಪಡೆದುದರಿಂದ ಅಮಾವಾಸ್ಯೆಗೆ ಪಿತೃತಿಥಿ ಎಂದೂ ಸಹ ಹೆಸರು ಬಂದಿದೆ.

         ಅಮಾವಾಸ್ಯಯಂದು ಚಂದ್ರನು ತೇಜೋರೂಪದಲ್ಲಿ ಪ್ರಸರಿಸುವ ತನ್ನ ಕಿರಣಗಳ ಮೂಲಕ ಭೂಮಿಯ ಮೇಲುಳ್ಳ ಲತೆಗಳೊಳಗೆ ಪ್ರವೇಶಿಸಿ ವನಔಷಧಗಳಲ್ಲಿ ಅಮೃತವನ್ನು ಪರಿಪೂರ್ಣವನ್ನಾಗಿಸಿ ಗಿಡಗಳಲ್ಲಿ ಜೀವಶಕ್ತಿಯನ್ನು ಉದ್ದೀಪವನ್ನಾಗಿಸುತ್ತಾನೆ. ಅದರಿಂದ ಆ ದಿನವು ವೃಕ್ಷ ಶಾಖೆಗಳಿಂದ ಎಲೆಗಳನ್ನು ಕತ್ತರಿಸಿದರೂ ಕನಿಷ್ಟಪಕ್ಷ ಉಗುರಿನಿಂದ ಕತ್ತರಿಸಿದರೂ ಅಂತಹರಿಗೆ ಬ್ರಹ್ಮಹತ್ಯೆ ಮಾಡಿದ ಮಹಾಪಾತಕವನ್ನು ಅಂಟಿಕೊಂಡು ದಾರುಣವಾದ ಕಷ್ಟಗಳುಂಟಾಗುತ್ತವೆ. ಕೃಷ್ಣಪಕ್ಷದಲ್ಲಿ ಚಂದ್ರನ ತೇಜಸ್ಸನ್ನು ಮೂವತ್ತು ಮೂರು ಕೋಟಿ

ದೇವತೆಗಳು ಅಗ್ನಿದೇವನು ಭುಜಿಸಿದ ನಂತರ, ಚಂದ್ರನು ಎರಡು ತೇಜಗಳೊಂದಿಗೆ ಇದ್ದು ಸೂರ್ಯಮಂಡಲದ ಉಪಕಂಠಕ್ಕೆ ತಲುಪಿದಾಗ ಸೂರ್ಯಚಂದ್ರರ ಸಂಗಮವೇರ್ಪಡುತ್ತದೆ. ಆ ಪರ್ವ ಕಾಲದಲ್ಲಿ ಕೃಷ್ಣಪಕ್ಷದ ಕೊನೆಯ ತೇಜವು ಭಾನುಮಂಡಲದೊಳಕ್ಕೆ ಪ್ರವೇಶಿಸಿ ಅಮಾವಾಸ್ಯ ದಿನದಂದು ಗಾಡಾಂಧಕಾರ ಉಂಟಾಗುತ್ತದೆ. ಪಿತೃತಿಥಿ ಸಮಯದಲ್ಲಿ ಚಂದ್ರನ ತೇಜವನ್ನು ಭುಜಿಸುವ ಪಿತೃಗಣಗಳು ಬ್ರಹ್ಮಮಾನಸಪುತ್ರನಾದ ಮನು ಪ್ರಜಾಪತಿಯ ವಂಶದಲ್ಲಿ ಜನಿಸಿದರು. ಇವರಲ್ಲಿ ಸೋಮಸದಸ್ಯರು, ಅಗ್ನಿಷ್ಣಾತರು, ಬರ್ಹಿಷದರು, ಸೋಮಪರು, ಹವಿರ್ಭುಜರು, ಆಜ್ಯಪರು, ಸುಕಾಲೀಕರು ಎಲ್ಲರೂ ಪ್ರಸಿದ್ದರಾದವರೇ ಆಗಿದ್ದಾರೆ.