ಬಿಲಾಸ್ಪುರ, ಮೇ 26: ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಪತ್ನಿಯೊಬ್ಬಳು ಗಾಢ ನಿದ್ದೆಯಲ್ಲಿದ್ದ ಪತಿ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ಅವರ ಖಾಸಗಿ ಅಂಗವನ್ನು ಕತ್ತರಿಸಿರುವ ಬೆಚ್ಚಿಬೀಳಿಸುವ ಘಟನೆ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯಾಗಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ರಾಜೇಶ್ ಕೌಶಿಕ್ ಎಂಬುವವರು ಈ ಕ್ರೂರ ದಾಳಿಗೆ ಒಳಗಾದ ವ್ಯಕ್ತಿ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಸರ್ಕಾರಿ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಾಜೇಶ್ ಕೌಶಿಕ್ ಮತ್ತು ಅವರ ಪತ್ನಿ ದ್ರೌಪದಿ ಬಾಯಿ ನಡುವೆ ಕಳೆದ ಕೆಲವು ದಿನಗಳಿಂದ ನಿರಂತರ ಕೌಟುಂಬಿಕ ಕಲಹ ನಡೆಯುತ್ತಿತ್ತು. ರಾಜೇಶ್ ಅವರಿಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂದು ದ್ರೌಪದಿ ಅನುಮಾನ ಪಡುತ್ತಿದ್ದಳು. ಘಟನೆ ನಡೆದ ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ನಂತರ ಮಧ್ಯರಾತ್ರಿ ಪತಿ ಗಾಢ ನಿದ್ದೆಯಲ್ಲಿದ್ದಾಗ ದ್ರೌಪದಿ ಕತ್ತಿಯಿಂದ ಅವರ ಖಾಸಗಿ ಭಾಗಕ್ಕೆ ಹಲ್ಲೆ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ.
ದಾಳಿಯಿಂದ ಬೆಚ್ಚಿಬಿದ್ದ ರಾಜೇಶ್ ತೀವ್ರ ರಕ್ತಸ್ರಾವದ ನಡುವೆಯೂ ಕಿರುಚುತ್ತಾ ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ತಂದೆಯ ಕಿರುಚಾಟ ಕೇಳಿದ ಅಪ್ರಾಪ್ತ ಮಗ ತಕ್ಷಣ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಕುಟುಂಬ ಸದಸ್ಯರು ರಾಜೇಶ್ ಮತ್ತು ಕತ್ತರಿಸಲಾದ ದೇಹದ ಭಾಗವನ್ನು ತೆಗೆದುಕೊಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ದ್ರೌಪದಿ ಬಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಅಕ್ರಮ ಸಂಬಂಧದ ಅನುಮಾನ ಹಾಗೂ ನಿರಂತರ ಕುಟುಂಬ ಜಗಳವೇ ಈ ಕೃತ್ಯಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


















