ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಈ ತಂಡದಲ್ಲಿ ದೆಹಲಿ ಮೂಲದ ಆಲ್ರೌಂಡರ್ ನಿಖಿಲ್ ಚೌಧರಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಭಾರತೀಯ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದರು. ಇದೀಗ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ನಿಖಿಲ್ ಚೌಧರಿ ಸ್ಥಾನ ಪಡೆದಿರಲಿಲ್ಲ. ಆದರೆ ವೈಯುಕ್ತಿಕ ಕಾರಣಗಳಿಮದಾಗಿ ಟ್ರಾವಿಸ್ ಹೆಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದೀಗ ನಿಖಿಲ್ ಚೌಧರಿಯನ್ನು ಆಸೀಸ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದ್ದಾಗಿದೆ.

ಹಾಗೂ ನಿಖಿಲ್ ಚೌಧರಿ ಈ ಹಿಂದೆ ಬಿಗ್ ಬ್ಯಾಷ್ ಲೀಗ್ನಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಆಲ್ರೌಂಡರ್ ಪ್ರದರ್ಶನ ನೀಡಿದ್ದ ಕಾರಣ ಅವರನ್ನು ಆಸ್ಟ್ರೇಲಿಯಾ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಭಾರತೀಯ ಮೂಲದ ತನ್ವೀರ್ ಸಂಘ, ಗುರಿಂದರ್ ಸಂಧು ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಇವರು ಯಾರು ಕೂಡ ಭಾರತದಲ್ಲಿ ಜನಿಸಿದವರಲ್ಲ. ಬದಲಾಗಿ ಅವರ ಪೋಷಕರು ಭಾರತೀಯರಾಗಿದ್ದರಿಂದ ಭಾರತೀಯ ಮೂಲದವರಾಗಿ ಗುರುತಿಸಿಕೊಂಡಿದ್ದರು. ಆದರೆ ನಿಖಿಲ್ ಚೌಧರಿ ಪಂಜಾಬ್ನಲ್ಲಿ ಜನಿಸಿ, ಪಂಜಾಬ್ನಲ್ಲೇ ಕ್ರಿಕೆಟ್ ಆಡಿ ಬೆಳೆದ ಆಟಗಾರ.

ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ನಿಖಿಲ್ ಆಯ್ಕೆಯು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ 62 ವರ್ಷಗಳ ಬಳಿಕ ಭಾರತೀಯ ಆಟಗಾರನೊಬ್ಬ ಸ್ಥಾನ ಪಡೆದಿರುವುದು ವಿಶೇಷ. ಇದಕ್ಕೂ ಮುನ್ನ, ಅಂದರೆ 1960 ರ ದಶಕದಲ್ಲಿ ಗುಜರಾತ್ ಮೂಲದ ರುಸಿ ಸುರ್ತಿ ಭಾರತ ತಂಡದ ಪರ ಆಡಿದ ನಂತರ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಅಲ್ಲಿನ ಕ್ವೀನ್ಸ್‌ಲ್ಯಾಂಡ್ ದೇಶಿ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 6 ದಶಕಗಳ ಬಳಿಕ ಭಾರತೀಯ ಸಂಜಾತ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
















