ಮನೆ ಸುದ್ದಿ ಜಾಲ ₹200 ಕೋಟಿಗೂ ಅಧಿಕ ವಂಚನೆ: ಲೀಸ್-ಬಾಡಿಗೆ ಪಾವತಿಸುವುದಾಗಿ ಜನರಿಗೆ ಕಂಪನಿ‌ ಮಾಲೀಕನಿಂದ ವಂಚನೆ

₹200 ಕೋಟಿಗೂ ಅಧಿಕ ವಂಚನೆ: ಲೀಸ್-ಬಾಡಿಗೆ ಪಾವತಿಸುವುದಾಗಿ ಜನರಿಗೆ ಕಂಪನಿ‌ ಮಾಲೀಕನಿಂದ ವಂಚನೆ

0

ಬೆಂಗಳೂರು: ಮನೆ ಲೀಸ್ ಪಡೆಯುವವರು ಹುಷಾರಾಗಿರಬೇಕು. ಮನೆಗಳನ್ನು ಲೀಸ್​ಗೆ ಪಡೆಯಲು ಬಯಸುವವರನ್ನೇ ಗುರಿಯಾಗಿಸಿಕೊಂಡು ಸುಮಾರು 200 ಕೋಟಿಗೂ ಅಧಿಕ ಹಣ ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಜಾನ್ಸ್ ಅಸೆಟ್ ಹೆಸರಿನ ಮಧ್ಯವರ್ತಿ ಕಂಪನಿಯ ವಿರುದ್ಧ 300ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಅದರ ಮಾಲೀಕ ಸ್ಟೀಫನ್ ಜಾನ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವಂಚನೆಗೊಳಗಾದವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿತ್ತಿದೆ.

ಈ ಕುರಿತು ಬೆಂಗಳೂರಿನಲ್ಲಿ ವಾಸಿಸಲು ಭೋಗ್ಯಕ್ಕೆ ಮನೆಗಳ ಕೊರತೆ ಇರುವುದನ್ನ ಬಂಡವಾಳ ಮಾಡಿಕೊಂಡ ಕಂಪನಿ, ‘ಲೀಸ್ ಹಣವನ್ನು ತಮ್ಮಲ್ಲಿ ಹೂಡಿಕೆ ಮಾಡಿದರೆ ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ತಾವೇ ಪಾವತಿ ಮಾಡುವುದಾಗಿ’ ನಂಬಿಸುತ್ತಿತ್ತು. ಸಾಕಷ್ಟು ಜನ ಭೋಗ್ಯಕ್ಕೆ ನೀಡುವ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ ಎಂದು ನಂಬಿದ್ದರು. ಒಬ್ಬೊಬ್ಬರಿಂದ ತಲಾ 10 ರಿಂದ 75 ಲಕ್ಷದವರೆಗೂ ಈ ಕಂಪನಿ ಹಣ ಪಡೆದಿತ್ತು. ಆರಂಭದಲ್ಲಿ ಕೆಲವು ತಿಂಗಳುಗಳ ಕಾಲ ಬಾಡಿಗೆ ಪಾವತಿಸುತ್ತಿದ್ದ ಕಂಪನಿ ನಂತರ ಬಾಡಿಗೆ ಪಾವತಿಸದೆ ಕಳ್ಳಾಟವಾಡುತ್ತಿತ್ತು. ತಾವು ಕಂಪನಿಗೆ 37 ಲಕ್ಷ ರೂ. ನೀಡಿದ್ದೇವೆ. ಆದರೆ ತಮ್ಮ ಮನೆ ಬಾಡಿಗೆ ಹಣ ಪಾವತಿಸಿರಲಿಲ್ಲ. ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ತಮ್ಮ ಹಣ ವಾಪಸ್ ಕೇಳಲು ಕಂಪನಿಯ ಬಳಿ ಹೋಗಿದ್ದೆವು. ಈ ವೇಳೆ ಹಣ ನೀಡಲು ನಿರಾಕರಿಸಿದ್ದ ಕಂಪನಿಯವರು ಅದೇ ಮೊತ್ತಕ್ಕೆ ತಿಂಗಳಿಗೆ ಶೇ. 4ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿತ್ತು. ಅದನ್ನು ನಂಬಿ ತಮ್ಮ ಹಣವನ್ನ ಹೂಡಿಕೆ ಮಾಡಿದ್ದೆವು.

ನಂತರ  ಕೇವಲ ಎರಡು ತಿಂಗಳು ಹಣ ನೀಡಿದ್ದ ಕಂಪನಿ ನಂತರ ವಂಚಿಸಿದೆ ಎಂದು ವಂಚನೆಗೊಳಗಾದ ಗಾಯತ್ರಿ ಅವರು ಆರೋಪಿಸಿದ್ದಾರೆ. ಸದ್ಯ ಕಂಪನಿಯನ್ನ ಮುಚ್ಚಿರುವ ಅದರ ಮಾಲೀಕ ಸ್ಟೀಫನ್ ಜಾನ್, ಕೋಟ್ಯಾಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾರೆ. ಇದೇ ಆರೋಪಿ ಈ ಹಿಂದೆ ಕೂಡ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದರು. ಹೊಸ ಕಂಪನಿಯ ಗ್ರಾಹಕರಿಂದ ಬಂದ ಹಣವನ್ನು ಹಳೆಯ ಗ್ರಾಹಕರಿಗೆ ನೀಡುತ್ತಾ ಪೋಂಜಿ ಸ್ಕೀಮ್ ಮಾದರಿಯಲ್ಲಿ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಸದ್ಯ ಹಣ ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.