ಮನೆ ರಾಜ್ಯ ಮಡಿಕೇರಿಯಲ್ಲಿ ಭೂಮಿ ಕಂಪಿಸಿದ ಅನುಭವ

ಮಡಿಕೇರಿಯಲ್ಲಿ ಭೂಮಿ ಕಂಪಿಸಿದ ಅನುಭವ

0

ಮಡಿಕೇರಿ(Madikeri): ಕೊಡಗು ಜಿಲ್ಲೆಯ ಕೆಲವೆಡೆ ಶನಿವಾರ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.

ಸಂಪಾಜೆ, ಕರಿಕೆ, ಚೆಂಬು, ಪೆರಾಜೆ ಭಾಗದಲ್ಲಿ ಬೆಳಿಗ್ಗೆ 9.10 ರಲ್ಲಿ ಸುಮಾರು 3 ಸೆಕೆಂಡ್ ಗಳ ಕಂಪನದ ಅನುಭವ ಆಗಿದೆ. ನೆಲದೊಳಗಿಂದ ವಿಚಿತ್ರವಾದ ಶಬ್ದವೂ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆ ಕುರಿತು ಪರಿಶೀಲನೆಗಾಗಿ ಕಂದಾಯ ಇಲಾಖೆಯ ತಂಡವು ಸ್ಥಳಕ್ಕೆ ತೆರಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ತಜ್ಞ ಅನನ್ಯ ವಾಸುದೇವ್, ಭೂಕಂಪ ಆಗಿರುವ ಕುರಿತು ಇನ್ನೂ ದೃಢಪಟ್ಟಿಲ್ಲ. ಭೂಮಿ ಕಂಪಿಸಿದೆ ಎಂದು ಜನರು ಮಾಹಿತಿ ನೀಡಿದ್ದಾರೆ. ರಿಕ್ಟರ್ ಮಾಪಕದ ಮಾಹಿತಿಯನ್ನು ವಿಶ್ಲೇಷಿಸಲಾಗುತ್ತಿದೆ ಎಂದು ತಿಳಿಸಿದರು.

ಸುಳ್ಯದ ವಿವಿದೆಡೆ ಭೂಮಿ ಕಂಪನ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ವಿವಿದೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮರ್ಕಂಜ, ಕೊಡಪ್ಪಾಲ, ಗೂನಡ್ಕ , ಅರಂತೋಡು ಮೊದಲಾದ ಕಡೆಗಳಲ್ಲಿ ಬೆಳಗ್ಗೆ 9.10 ರಿಂದ 9.15 ರ ಆಸುಪಾಸಿನಲ್ಲಿ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ. ಈ ಕಂಪನದ ಬಗ್ಗೆ ಕಾರಣಗಳು ಇಲಾಖೆಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ.