ಮನೆ ಭಾವನಾತ್ಮಕ ಲೇಖನ ಹದಿಹರೆಯದ ಹಂದರಗಳು

ಹದಿಹರೆಯದ ಹಂದರಗಳು

0

ಬದುಕು ಒಂದು ನದಿಯಂತೆ. ನದಿ ಹುಟ್ಟಿದ ಸ್ಥಳದಿಂದ ತನ್ನ ಗಮ್ಯಸ್ಥಾನದ ತಲುಪುವುದರೊಳಗೆ ಅನೇಕ ಬೆಟ್ಟಗುಡ್ಡ ಕಣಿವೆ ಬಿಸಿಲು ತಂಪು ವಾತಾವರಣ ಹಾದುಹೋಗುತ್ತದೆ. ಕೆಲವೊಮ್ಮೆ ಸರಾಗವಾಗಿ ಹರಿದರೆ ಕೆಲವೊಮ್ಮೆ ಧುಮ್ಮಿಕ್ಕುತ್ತದೆ, ಕೆಲವೊಮ್ಮೆ ಸುಳಿಗಳು ನಿರ್ಮಾಣಗೊಳ್ಳುತ್ತವೆ. ಒಂದೊಂದು ಮಜಲಿನಲ್ಲಿ, ಒಂದೊಂದು ತಿರುವಿನಲ್ಲಿಯು ತನ್ನದೇ ಆದಂತಹ ವಿಭಿನ್ನ ಸಂದರ್ಭಗಳು, ಸಮಸ್ಯೆಗಳು, ಅನುಕೂಲಗಳು, ಸಾಮರ್ಥ್ಯಗಳು ಎಲ್ಲವೂ ತಾನಾಗಿಯೇ ತುಂಬಿರುತ್ತವೆ.

ಹಾಗೆಯೇ ಮನುಷ್ಯನೂ ಕೂಡ ಹುಟ್ಟಿನಿಂದ ಕೊನೆಯವರೆಗೂ ಅನೇಕ ಮಜಲುಗಳನ್ನು ಹಾದು ಹೋಗಬೇಕಾಗುತ್ತದೆ. ಬಾಲ್ಯದಿಂದ ಪ್ರಬುದ್ಧತೆಗೆ ಪ್ರವೇಶಿಸುವ ವಯೋಧರ್ಮ ಹೆಚ್ಚು ತೀಕ್ಷ್ಣವಾದ ಸಂದರ್ಭಗಳನ್ನು ತಂದುಬಿಡುತ್ತದೆ. ಪ್ರಬುದ್ಧ ಅವಸ್ಥೆಗೆ ತಲುಪುವ ಹಂತ ಇತ್ತೀಚೆಗೆ ಒಂಬತ್ತನೇ ವಯಸ್ಸಿನಿಂದಲೇ ಶುರುವಾಗಿಬಿಡುತ್ತದೆ.

ಪ್ರೌಢಾವಸ್ಥೆಗೆ ತಲುಪುವ ಹಂತವೆಂದರೆ ಬದಲಾವಣೆ ಇರುತ್ತದೆ. ಬಾಲ್ಯವಸ್ಥೆಯಲ್ಲಿಒಂದು ಹಂತದವರೆಗೆ ಹೆಣ್ಣುಮಕ್ಕಳು ಗಂಡುಮಕ್ಕಳು ಎನ್ನುವ ಭೇದವಿಲ್ಲದಂತೆ ಧ್ವನಿಯಲ್ಲಿರೂಪದಲ್ಲಿಒಂದೇ ತರ ಕಾಣುವ ಮಕ್ಕಳು ಇಲ್ಲಿಂದ ಮುಂದೆ ಸ್ಪಷ್ಟವಾದ ವಿಂಗಡನೆಗೆ ಒಳಗಾಗುತ್ತಾರೆ. ಹಾಗಾಗಿ ಇಲ್ಲಿಶಾರೀರಿಕವಾಗಿ ತನ್ನ ರೂಪಸ್ವಭಾವ ಮತ್ತು ಲಿಂಗದ (ಜೆಂಡರ್) ಅಭಿವ್ಯಕ್ತಿ ರೂಪುಗೊಳ್ಳುತ್ತದೆ.

ಇದರ ಜೊತೆ ಜೊತೆಯಲಿ ಇಲ್ಲಿಯವರೆಗೆ ಮಗುವಾಗಿ ಎಲ್ಲರಿಂದ ಮುದ್ದು ಪೋಷಣೆ ತಿದ್ದುವಿಕೆ ಶಿಕ್ಷೆ ಇತ್ಯಾದಿ ನಿಬಂಧನೆಗೆ ಒಳಪಡುತ್ತಿದ್ದ ಮಗು ಅದನ್ನು ಮೀರಿ ನಿಂತು ತನ್ನದೇ ಆದಂತಹ ವ್ಯಕ್ತಿತ್ವ ಬೆಳೆಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿರುತ್ತದೆ. ಸಾಮಾಜಿಕವಾಗಿ ತನ್ನದೇ ಆದಂತಹ ಛಾಪು ರೂಪಿಸಿಕೊಳ್ಳಲು ಹೋರಾಟ ನಡೆಯುತ್ತಿರುತ್ತದೆ.

ಇದು ಪ್ರಕೃತಿ ಸಹಜವಾದಂತಹ ಪರಿವರ್ತನೆಯ ಹಂತ ಅಥವಾ ಘಟ್ಟ. ಶಾರೀರಿಕ ಪರಿವರ್ತನೆ, ಮಾನಸಿಕ ಪಕ್ವತೆ, ಸಾಮಾಜಿಕ ಜವಾಬ್ದಾರಿ, ವೃತ್ತಿಪರ ಆಯ್ಕೆ, ಆಧ್ಯಾತ್ಮಿಕ ಸ್ಪಷ್ಟತೆ, ಆರ್ಥಿಕ ಸ್ವಾವಲಂಬನೆ, ವೈಯಕ್ತಿಕ ಅಗತ್ಯಗಳ ಸ್ಪಷ್ಟತೆ ಹೀಗೆ ಒಂದು ಸ್ವರೂಪ ಮೂರ್ತರೂಪಗೊಳ್ಳಲಾರಂಭಿಸುತ್ತದೆ

ಈ ಹಂತದಲ್ಲಿತನ್ನದೇ ಆದಂತಹ ಅಸ್ತಿತ್ವವನ್ನು ವ್ಯಕ್ತಿತ್ವವನ್ನು ಸ್ವರೂಪವನ್ನು ಹೊರಹೊಮ್ಮಿಸಲು ಹೋರಾಟ ಆಂತರಿಕವಾಗಿ ನಡೆಯುತ್ತಿರುತ್ತದೆ. ಹಳೆಯ ಸ್ವರೂಪದ ಜೊತೆಗೆ ಹೊಸದಾದ ಸಾಮರ್ಥ್ಯವು ಆವರಿಸಿಕೊಳ್ಳುತ್ತದೆ. ಈ ಹಂತದಲ್ಲಿಅವರಿಗೆ ಸಹನಾಪೂರಿತ ಮಾರ್ಗದರ್ಶನ ಸಹಾಯ ಸಾಂತ್ವನ ಹುರಿದುಂಬಿಸುವಿಕೆ ಬಹಳ ಅಗತ್ಯವಿರುತ್ತದೆ.

ಹರೆಯದವರ ಸ್ವಭಾವ

ದುಡುಕುತನ -ಮೆದುಳಿನಲ್ಲಿಪ್ರೌಢಿಮೆಗೆ ಅಗತ್ಯವಾದ ಬೆಳವಣಿಗೆ ಪರಿಪೂರ್ಣವಾಗಿ ಆಗದಿರುವುದಿಲ್ಲ. ಆದ್ದರಿಂದ ಭಾವನಾತ್ಮಕವಾಗಿ ದುಡುಕುತನ, ಅವಸರ, ಅತಿವೇಗ, ವಿಚಾರ ಮಾಡದೆ ಕೆಲಸ ಮಾಡುವ ಪ್ರವೃತ್ತಿ ಸಹಜವಾಗಿ ಇರುತ್ತದೆ.

ಭ್ರಾಮಕ ಜಗತ್ತಿನಲ್ಲಿತಾನು ಏನನ್ನೋ ಸಾಧಿಸಿಬಿಟ್ಟಿರುವೆ ಎಂದು ಭ್ರಮೆ ತುಂಬಿಸುವಂತಹ ಗೇಮಿಂಗ್, ಫೋರ್ನ್ ಅಡಿಕ್ಷನ್ ಇತ್ಯಾದಿಗಳಿಗೂ ಒಳಗಾಗಬಹುದು.

ಪ್ರಶ್ನಿಸುವ ಪ್ರವೃತ್ತಿ-ಇಲ್ಲಿಯವರೆಗೆ ತಾವು ಪಡೆದುಕೊಂಡಂತಹ ಸಂಸ್ಕೃತಿ ಸಂಸ್ಕಾರ ವಿಚಾರಧಾರೆ ವಿದ್ಯೆಯನ್ನು ಕೂಡ ಪರೀಕ್ಷಿಸಿ ಅಳವಡಿಸಿಕೊಳ್ಳುವ ಪ್ರವೃತ್ತಿ ತುಂಬಿರುತ್ತದೆ. ಏಕೆಂದರೆ ಬೇಕು-ಬೇಡಗಳ ವಿಮರ್ಶೆ ಒಳ ಮನಸ್ಸಿನಲ್ಲಿನಡೆಯುತ್ತಿರುತ್ತದೆ. ಆದರೆ ಬಹಳಷ್ಟು ಸಲ ಅದರ ಅರಿವು ಹೊರ ಮನಸ್ಸಿಗೆ ಇರುವುದಿಲ್ಲ. ಹಾಗಾಗಿ ತಾಯಿ ತಂದೆಯನ್ನೇ ಪ್ರಶ್ನಿಸುವ, ಅವರು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಕಾಣಬರುತ್ತದೆ.

ತಾನೆಂದರೆ ವಿಭಿನ್ನ ಎಂದು ಸಾಧಿಸಿ ತೋರಿಸುವ ಭಾವನೆಯು ತುಂಬಿರುತ್ತದೆ ಕೆಲವೊಮ್ಮೆ ಇದು ನಮ್ಮ ಮನೆಯ ಸಂಸ್ಕತ್ರೃತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಕೂಡ ಕಂಡುಬರುತ್ತದೆ. ಆಧ್ಯಾತ್ಮಿಕತೆಯ ವಿಷಯದಲ್ಲಿಯೂ ಅಷ್ಟೇ ಮನಸ್ಸು ಒಪ್ಪದಿದ್ದರೆ ನಾನು ನಂಬುವುದಿಲ್ಲನನಗೆ ಇದ್ಯಾವುದರೂ ಅಗತ್ಯವೂ ಇಲ್ಲಎನ್ನುವ ಹುಚ್ಚು ಭ್ರಮೆಯೂ ತುಂಬಬಹುದು/ ನನ್ನ ಸಮ ವಯಸ್ಕರಿಗಿಂತ ನಾನು ಭಿನ್ನ ಎಂದು ಅತಿಯಾದ ಭಕ್ತಿಯು ಕಾಣಬಹುದು. ಹುಚ್ಚು ಸಾಹಸಗಳನ್ನು ಪ್ರದರ್ಶಿಸುವ ಮನೋಭಾವ, ವಾಹನಗಳನ್ನು ಅತಿವೇಗವಾಗಿ ಓಡಿಸುವುದು, ವಿಭಿನ್ನ ರೀತಿಯಲ್ಲಿನನ್ನ ಸ್ಮೋಕಿಂಗ್ ಸ್ಟೈಲ್ ಇದೆ, ಎಷ್ಟು ಆಲ್ಕೋಹಾಲ್ ಕುಡಿದರೂ ನಾನು ನನ್ನನ್ನು ನಿಭಾಯಿಸಿಕೊಳ್ಳಬಲ್ಲೆ, ಕ್ಲಾಸಿಗೆ ಹೋಗದೆ/ ಓದದೆ ಪಾಸಾಗಬಲ್ಲೆ, ತಪ್ಪುಗಳನ್ನು ಮಾಡಿಯೂ ಸಿಕ್ಕಿಹಾಕಿಕೊಳ್ಳದೆ ಹೊರಬರಬಲ್ಲೆ, ತಾಯಿ-ತಂದೆಯರಿಗಿಂತ ನನ್ನ ತಿಳಿವಳಿಕೆ ಜಾಸ್ತಿ ಇದೆ. ನಾನು ಒಂದು ದಿನಇದ್ದಕ್ಕಿದ್ದಂತೆ ಅತ್ಯಂತ ಪ್ರಖ್ಯಾತವಾಗಿ ಬಿಡುತ್ತೇನೆ, ಇತ್ಯಾದಿಯಾಗಿ ತನ್ನ ಹಿರಿಮೆಗಳನ್ನು ನಕಾರಾತ್ಮಕವಾಗಿ ಪ್ರದರ್ಶಿಸಿಕೊಳ್ಳುವಭ್ರಮೆಗಳಿಂದ ತುಂಬಿರಬಹುದು.

ನಿರ್ವಹಣೆ ಹೇಗೆ?

ಅವರ ಹೊರಗಿನ ನಡವಳಿಕೆ ಸ್ವಭಾವಗಳಿಗೆ ವಿಚಲಿತರಾಗದೆ ಅವರವರ ಮನಸ್ಸಿನಲ್ಲಿಎಂತಹ ಗೊಂದಲ ಇರಬಹುದು ಎನುವುದನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು.

* ಇದರಲ್ಲಿನ ಬಹಳಷ್ಟು ಸ್ವಭಾವಗಳು ವಯೋ ಧರ್ಮಕ್ಕನುಗುಣವಾಗಿ ತಾನಾಗಿಯೇ ಬದಲಾಗಿಬಿಡುತ್ತದೆ.

* ಸುತ್ತಲಿನ ವಾತಾವರಣ, ಅವರು ನೋಡುವ ದೃಶ್ಯಾವಳಿಗಳು,ಎಲ್ಲವೂ ಅವರ ಮೇಲೆ ಅಪಾರವಾದ ಪರಿಣಾಮ ಬೀರುತ್ತವೆ.

* ಅವರು ಮನಸ್ಸಿನಲ್ಲಿಯಾರನ್ನು ಯಾವುದನ್ನು ಆದರ್ಶವಾಗಿ ಯೂ ಸರಿಯೆಂದು ತಿಳಿದುಕೊಂಡಿದ್ದಾರೆ ಎನ್ನುವುದು ಮುಖ್ಯವಾಗಿಬಿಡುತ್ತದೆ.

* ದುವ್ರ್ಯಸನ ದುಶ್ಚಟ ಇಂತಹ ಸ್ವಭಾವಗಳಿಗೆ ಮಕ್ಕಳು ಒಳಗಾಗಿದ್ದಲ್ಲಿ, ದೂರದೃಷ್ಟಿತ್ವ, ಸಹನೆ, ತಿಳಿವಳಿಕೆ, ತಾಳ್ಮೆಯಿಂದ ವಿಭಿನ್ನ ಮಾರ್ಗೋಪಾಯಗಳನ್ನು ಕಂಡುಕೊಂಡು ಮಾರ್ಗದರ್ಶನ ಮಾಡುವುದೇ ಪೋಷಕರ ನಿಜವಾದ ಜವಾಬ್ದಾರಿಯಾಗುತ್ತದೆ.

* ಅಸಹನೆಯಿಂದ ಕೋಪಇತ್ಯಾದಿಗಳಿಂದ ಮಕ್ಕಳ ಜೊತೆ ಸಂಪರ್ಕ ಕಳೆದುಕೊಳ್ಳಬೇಡಿ.

* ತೀರಾ ಅಗತ್ಯವಿದ್ದಲ್ಲಿಸೂಕ್ತ ವೃತ್ತಿಪರ ಸಹಾಯ ಪಡೆದುಕೊಳ್ಳಿ. ಸಮಾಜಮುಖಿಗಳಾಗುತ್ತಾರೆ ಸಮಾಜಘಾತುಕರಾಗುತ್ತಾರೆ ಎಂದು ನಿರ್ಧರಿಸುವ ಸಮಯ ಇದಾಗಿರುತ್ತದೆ. ಹಾಗಾಗಿ ಸಮಾಜ ಮತ್ತು ಪೋಷಕರ ಜವಾಬ್ದಾರಿ ಈ ಹಂತದಲ್ಲಿಹೆಚ್ಚಿನ ಮಟ್ಟದಲ್ಲಿಇರುತ್ತದೆ. ಹಾಗಾಗಿ ದೃಢ ಮನಸ್ಕರಾಗಿಯೂ ಸಹನಾಶೀಲರಾಗಿ ಇಂತಹ ಸಮಸ್ಯೆಯನ್ನು ನಿರ್ವಹಿಸುವುದು ಮುಖ್ಯವಾಗುತ್ತದೆ.

ಇದರ ಜೊತೆಜೊತೆಗೆ ಸಕಾರಾತ್ಮಕ ಸ್ವಭಾವಗಳು ಇರುತ್ತವೆ. ತಮ್ಮತನವನ್ನು ಗುರುತಿಸಿಕೊಳ್ಳುವ ಸಮಯದಲ್ಲಿತಮ್ಮ ಗುರಿ, ತಮ್ಮ ಉದ್ದೇಶ ಇತ್ಯಾದಿಗಳ ಬಗ್ಗೆ ಮಕ್ಕಳಲ್ಲಿನಿಖರತೆಯು ಇರಬಹುದು. ಇಂತಹ ಸ್ವಭಾವ ಸಾಮರ್ಥ್ಯ ಕಂಡುಬಂದಲ್ಲಿಅವುಗಳನ್ನು ಅರ್ಥಮಾಡಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪುಷ್ಟಿಕೊಡುವುದು ಕೂಡ ಬಹಳ ಮುಖ್ಯ.

ಸಂಸ್ಕೃತದ ಉಕ್ತಿಯಂತೆ ‘ಶೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್’ ಅಂದರೆ ಹದಿನಾರರ ಹರೆಯದಲ್ಲಿಮಕ್ಕಳನ್ನು ಮಿತ್ರರಂತೆ ಕಾಣಬೇಕು.