ಮನೆ ಸುದ್ದಿ ಜಾಲ ಜೀವನಾಂಶ ಇಲ್ಲ, 3ನೇ ವ್ಯಕ್ತಿಯೂ ನಮ್ಮಿಬ್ಬರ ನಡುವೆ ಬಂದಿಲ್ಲ – ವಿಚ್ಛೇದನಕ್ಕೆ ಸೂರಜ್ ನಂಬಿಯಾರ್ ಸ್ಪಷ್ಟನೆ..!

ಜೀವನಾಂಶ ಇಲ್ಲ, 3ನೇ ವ್ಯಕ್ತಿಯೂ ನಮ್ಮಿಬ್ಬರ ನಡುವೆ ಬಂದಿಲ್ಲ – ವಿಚ್ಛೇದನಕ್ಕೆ ಸೂರಜ್ ನಂಬಿಯಾರ್ ಸ್ಪಷ್ಟನೆ..!

0

ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ವಿಚ್ಛೇದನ ಘೋಷಿಸಿದ ಬೆನ್ನಲ್ಲೇ, ಜೀವನಾಂಶ ಹಾಗೂ ಮೂರನೇ ವ್ಯಕ್ತಿ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೆ ಹಂಚಿಕೊಂಡಿರುವ ಅವರು, ನಾವು ದೂರಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಹೇಳಿದ್ದಾರೆ.

ಯಾವುದೇ ಜೀವನಾಂಶ ಇಲ್ಲ, ಯಾವುದೇ ವಿವಾದ ಇಲ್ಲ, ನಮ್ಮಿಬ್ಬರ ನಡುವೆ ಯಾವುದೇ ಮೂರನೇ ವ್ಯಕ್ತಿಯ ಆಗಮನವೂ ಆಗಿಲ್ಲ. ಮೌನಿ ಮತ್ತು ನಾನು ಪರಸ್ಪರ ಗೌರವದೊಂದಿಗೆ ಬೇರಾಗಿದ್ದೇವೆ. ಉಳಿದ ಎಲ್ಲಾ ಸುದ್ದಿಗಳು ಕೇವಲ ಕಾಲ್ಪನಿಕ ಕಥೆಗಳು ಎಂದು ಸೂರಜ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಖಾಸಗಿ ಬದುಕಿಗೆ ಸಂಬಂಧವಿಲ್ಲದ ಸ್ನೇಹಿತರನ್ನು ಎಳೆದು ತರುವುದು ಸರಿಯಲ್ಲ ಎಂದು ಮಾಧ್ಯಮಗಳ ಕೆಲ ವರದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ನಮ್ಮ ಜಂಟಿ ಹೇಳಿಕೆಯಲ್ಲಿ ಹೇಳಬೇಕಾದ ಎಲ್ಲವನ್ನೂ ಹೇಳಿದ್ದೇವೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ ಮೌನಿ ರಾಯ್ ಮತ್ತು ಸೂರಜ್ ವಿಚ್ಛೇದನ ಪಡೆದ ನಂತರವೂ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಮೌನಿ ರಾಯ್ ತಮ್ಮ ಮದುವೆ ಪೋಟೋಗಳನ್ನು ಇನ್‌ಸ್ಟಾಗ್ರಾಂನಿಂದ ಇಂದಿಗೂ ಅಳಿಸಿಹಾಕಿಲ್ಲ.

ಮೇ 14ರಂದು ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಇನ್‌ಸ್ಟಾಗ್ರಾಂನಲ್ಲಿ ಇಬ್ಬರೂ ಒಟ್ಟಿಗೆ ವಿಚ್ಛೇದನ ಘೋಷಿಸಿದ್ದರು. ಪರಸ್ಪರ ಒಪ್ಪಿಕೊಂಡೇ ಪ್ರತ್ಯೇಕ ಮಾರ್ಗಗಳಲ್ಲಿ ಸಾಗಲು ತೀರ್ಮಾನಿಸಿದ್ದೇವೆ. ಈ ಹಂತವನ್ನು ಖಾಸಗಿಯಾಗಿ ಎದುರಿಸಲು ಅವಕಾಶ ನೀಡಬೇಕು ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಈಗ ವಿಚ್ಛೇದನದ ನಂತರ ಹರಡಿರುವ ಊಹಾಪೋಹಗಳಿಗೆ ಸೂರಜ್ ಪ್ರತಿಕ್ರಿಯಿಸಿದ್ದಾರೆ.