ಮನೆ ಅಪರಾಧ ತಿಹಾರ್ ಜೈಲಿನಲ್ಲಿ ಲೈಂಗಿಕ ಬಯಕೆ ತೀರಿಸಿಕೊಳ್ಳಲು ವ್ಯವಸ್ಥೆ: ಬಂದೀಖಾನೆಯ ಮಾಜಿ ಕಾನೂನು ಅಧಿಕಾರಿ ಆರೋಪ

ತಿಹಾರ್ ಜೈಲಿನಲ್ಲಿ ಲೈಂಗಿಕ ಬಯಕೆ ತೀರಿಸಿಕೊಳ್ಳಲು ವ್ಯವಸ್ಥೆ: ಬಂದೀಖಾನೆಯ ಮಾಜಿ ಕಾನೂನು ಅಧಿಕಾರಿ ಆರೋಪ

0

ನವದೆಹಲಿ: ತಿಹಾರ್‌ ಜೈಲಿನಲ್ಲಿ ಬಂಧನದಲ್ಲಿರುವ ಪ್ರಭಾವೀ ವ್ಯಕ್ತಿಗಳಿಗೆ ಲೈಂಗಿಕ ಬಯಕೆ ತೀರಿಸಿಕೊಳ್ಳಲೂ ವ್ಯವಸ್ಥೆ ಮಾಡಿಕೊಡುವ ಬಗ್ಗೆ ತಮಗೆ ಗೊತ್ತಿದೆ ಎಂದು ಬಂದೀಖಾನೆಯ ಮಾಜಿ ಕಾನೂನು ಅಧಿಕಾರಿ ಸುನೀಲ್‌ ಗುಪ್ತಾ ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಅವರು ಜೈಲಿನೊಳಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೊಗೆ ಸಂಬಂಧಿಸಿ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

ತಿಹಾರ್‌ ಜೈಲು ರಾಷ್ಟ್ರದ ಅತಿದೊಡ್ಡ ಬಂದೀಖಾನೆ ಎಂದು ಗುರುತಿಸಿಕೊಂಡಿದ್ದು, ಸುನೀಲ್‌ ಗುಪ್ತಾ ಅವರು 1981 ರಿಂದ 2016ರ ವರೆಗೆ ತಿಹಾರ್‌ ಜೈಲಿನಲ್ಲಿ ಕಾನೂನು ಅಧಿಕಾರಿ ಮತ್ತು ವಕ್ತಾರರಾಗಿ ಕೆಲಸ ಮಾಡಿದ್ದಾರೆ. ನಿವೃತ್ತಿಯಾದ ಒಂದು ವರ್ಷದ ಬಳಿಕ ‘ಬ್ಲ್ಯಾಕ್‌ ವಾರೆಂಟ್‌’ ಎಂಬ ಹೆಸರಿನ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಪ್ರಭಾವೀ ಕೈದಿಗಳು ಜೈಲಿನೊಳಗೆ ಕಾನೂನು ಮುರಿದು ಹೇಗೆ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ್ದಾರೆ.

ಬಂಧಿತ ಪ್ರಭಾವೀ ವ್ಯಕ್ತಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಮತ್ತು ವಿಶೇಷ ಉಪಚಾರಗಳು ಜೈಲಿನ ಆವರಣದಲ್ಲೇ ಸಿಗುತ್ತವೆ. ಇಂತಹ ಕೃತ್ಯಗಳಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಹಕೈದಿಗಳು ಭಾಗಿಯಾಗಿರುತ್ತಾರೆ. ತಾನು ವರದಿ ಮಾಡಿದ ಕೆಲವು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗುಪ್ತಾ ಹೇಳಿದರು.

ನನ್ನ ಅವಧಿಯಲ್ಲಿ, ಪ್ರಭಾವಿ ವ್ಯಕ್ತಿಗಳು ಲೈಂಗಿಕ ಬಯಕೆಗಳನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದುದನ್ನು ನೋಡಿದ್ದೇನೆ. ತಮ್ಮ ಕಾಮನೆಗಳನ್ನು ತೀರಿಸಿಕೊಳ್ಳಲು ಸಣ್ಣ ಪ್ರಾಯದ ಕೈದಿಗಳನ್ನು ಬಳಸಿಕೊಳ್ಳುವುದನ್ನು ಗಮನಿಸಿದ್ದೇನೆ. ಸಹಕೈದಿಗಳೊಂದಿಗೆ ಸಹಮತದಿಂದ ಅಥವಾ ಜೈಲಿನ ಅಧಿಕಾರಿಗಳ ಸಹಾಯದಿಂದ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳುತ್ತಾರೆ ಎಂದು ಗುಪ್ತಾ ಬೇಸರಿಸಿದರು.

ಗುಪ್ತಾ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ತಿಹಾರ್‌ ಜೈಲಿನ ಹಾಲಿ ವಕ್ತಾರ ಧೀರಜ್‌ ಮಥುರ್‌ ನಿರಾಕರಿಸಿದ್ದಾರೆ.

ಸಣ್ಣ ವಯಸ್ಸಿನ ಕೈದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರವಾಗಿ ಸಂಜಯ್‌ ಸೂರಿ ಮತ್ತು ದೆಹಲಿ ಆಡಳಿತದ ನಡುವೆ ಕಾನೂನು ಹೋರಾಟಕ್ಕೆ ಸಂಬಂಧಿಸಿ 1987ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಗಮನಾರ್ಹ.

ಹಿಂದಿನ ಲೇಖನಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಬೇಕೆಂಬುದು ನಮ್ಮ ನಿಲುವು: ಮಹಾರಾಷ್ಟ್ರ ಸಿಎಂ
ಮುಂದಿನ ಲೇಖನಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ ಆಗಿತ್ತು- ಶಾರೀಕ್ ಬೆಂಬಲಿಸಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೇಳಿಕೆ: ಮತ್ತೊಂದು ದಾಳಿ ಬೆದರಿಕೆ