ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ವಿದೇಶಿ ವಿನಿಮಯವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ನಾಗರಿಕರು ಅನಗತ್ಯವಾಗಿ ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದರು. ಪ್ರಧಾನಿ ಈ ಹೇಳಿಕೆ ನೀಡಿದ ಎರಡು ದಿನಗಳ ನಂತರ, ಕೇಂದ್ರ ಸರ್ಕಾರ ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಶೇ. ಆರು ರಿಂದ ಶೇ. 15 ಕ್ಕೆ ದ್ವಿಗುಣಗೊಳಿಸಿದ್ದು ಮೇ 13ರಿಂದ ಜಾರಿಗೆ ಬರುವಂತೆ ಶೇ. 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಮತ್ತು ಶೇ. 5 ರಷ್ಟು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಗಳನ್ನು ವಿಧಿಸಿ ಆದೇಶಿಸಲಾಗಿದೆ. ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಭಾರತವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇಕಡಾ 6 ರಿಂದ 15 ಕ್ಕೆ ಹೆಚ್ಚಿಸಿದೆ. ಅಮೂಲ್ಯ ಲೋಹಗಳ ವಿದೇಶಿ ಖರೀದಿಗಳನ್ನು ತಡೆಯುವ ಮತ್ತು ದೇಶದ ವಿದೇಶಿ ವಿನಿಮಯ ಮೀಸಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಸಮಾಜ ಕಲ್ಯಾಣ ಸರ್ಚಾರ್ಜ್ ಮತ್ತು ಅಮೂಲ್ಯ ಲೋಹಗಳ ಆಮದಿನ ಮೇಲಿನ AIDC ಯನ್ನು ಪರಿಷ್ಕರಿಸಿದೆ.
ಇದರಿಂದ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ವಿದೇಶಿ ವಿನಿಮಯ ಮೀಸಲುಗಳ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ವಾರದ ಆರಂಭದಲ್ಲಿ ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬಿಕ್ಕಟ್ಟಿನ ಸಮಯದಲ್ಲಿ ವಿದೇಶಿ ವಿನಿಮಯವನ್ನು ಸಂರಕ್ಷಿಸಲು ಇಂಧನ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಬಳಸಿ, ಚಿನ್ನದ ಖರೀದಿಯನ್ನು ಮುಂದೂಡಿ ಮತ್ತು ಅನಗತ್ಯ ವಿದೇಶಿ ಪ್ರಯಾಣವನ್ನು ತಪ್ಪಿಸುವಂತೆ ಜನರ ಬಳಿ ಮನವಿ ಮಾಡಿದ್ದರು. ಮೂಲಗಳ ಪ್ರಕಾರ, ಭಾರತದ ಚಿನ್ನದ ಆಮದು ಪ್ರಮಾಣ 2025-26ರಲ್ಲಿ ಶೇ. 24 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈ ಮೂಲಕ ಅದು ದಾಖಲೆಯ 71.98 ಬಿಲಿಯನ್ ಡಾಲರ್ಗೆ ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿವೆ. ದೆಹಲಿಯಲ್ಲಿ ಮಂಗಳವಾರ ಚಿನ್ನದ ಬೆಲೆ 1,500 ರೂ. ಏರಿಕೆಯಾಗಿ 10 ಗ್ರಾಂಗೆ 1,56,800 ರೂ. ತಲುಪಿದ್ದರೆ, ಬೆಳ್ಳಿ ಬೆಲೆ 12,000 ರೂ. ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ 2,77,000 ರೂ. ತಲುಪಿದೆ.
ಈ ಕುರಿತು ಅಮೂಲ್ಯ ರತ್ನಗಳು ಮತ್ತು ಆಭರಣ ಉದ್ಯಮವನ್ನು ಬೆಂಬಲಿಸಲು ಮತ್ತು ಕಳ್ಳಸಾಗಣೆ ತಡೆಯಲು ಸರ್ಕಾರವು 2024-25ರ ಬಜೆಟ್ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ ಆರಕ್ಕೆ ಇಳಿಸಿತ್ತು. ಆದರೆ, ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ರೂಪಾಯಿಯ ಮೇಲಿನ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಈಗ ತನ್ನ ಹಿಂದಿನ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದೆ. ರಷ್ಯಾ – ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತವು 2022 ರಲ್ಲಿ ಚಾಲ್ತಿ ಖಾತೆ ಕೊರತೆ ನಿಯಂತ್ರಿಸಲು ಮತ್ತು ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಚಿನ್ನದ ಆಮದು ಸುಂಕವನ್ನು ಶೇಕಡಾ 15 ಕ್ಕೆ ಹೆಚ್ಚಿಸಿತ್ತು. ಪಶ್ಚಿಮ ಏಷ್ಯಾ ಸಂಘರ್ಷವನ್ನು ಭಾರತಕ್ಕೆ ಲೈವ್ ಆಫ್ ಪೇಮೆಂಟ್ ಬ್ಯಾಲೆನ್ಸ್ ಒತ್ತಡ ಪರೀಕ್ಷೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಬಣ್ಣಿಸಿದ್ದಾರೆ. ಇದೇ ವೇಳೆ, ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

















