ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಂತರ 62 ವರ್ಷದ ವ್ಯಕ್ತಿಯೊಬ್ಬರು ಪಾರ್ಶವಾಯುವಿಗೆ ತುತ್ತಾದ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ₹ 65 ಲಕ್ಷ ನೀಡುವಂತೆ ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ಸ್ ಹೃದಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಅದರ ಹೃದಯ ವಿಭಾಗದ ಮುಖ್ಯಸ್ಥರಿಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಈಚೆಗೆ ಆದೇಶಿಸಿದೆ.
ಅನಗತ್ಯವಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂಬ ಕುಟುಂಬದ ಆರೋಪದಲ್ಲಿ ಹುರುಳಿದೆ ಎಂದು ಆಯೋಗದ ಅಧ್ಯಕ್ಷತೆ ವಹಿಸಿದ್ದ ಸದಸ್ಯ, ನ್ಯಾಯಮೂರ್ತಿ ರಾಮ್ ಸೂರತ್ ರಾಮ್ ಮೌರ್ಯ ಮತ್ತು ತಾಂತ್ರಿಕ ಸದಸ್ಯ ಭರತ್ ಕುಮಾರ್ ಪಾಂಡ್ಯ ಅವರು ಆಗಸ್ಟ್ 7ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.
ಹೃದಯ ವೈದ್ಯರು ರೋಗಿಯ ಶ್ವಾಸಕೋಶದ ಸ್ಥಿತಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದು ಆಂಜಿಯೋಪ್ಲ್ಯಾಸ್ಟಿಗೆ ಮುಂದಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಆಂಜಿಯೋಪ್ಲಾಸ್ಟಿ ಆಯ್ಕೆಯಾಗಿತ್ತೇ ವಿನಾ ಅನಿವಾರ್ಯವಾಗಿರಲಿಲ್ಲ. ರೋಗಿ ಮತ್ತು ಆತನ ಮಗಳು ಖುದ್ದು ವೈದ್ಯರಾಗಿದ್ದು ಸಾಧಕ ಬಾಧಕಗಳನ್ನು ಗಮನಿಸಿಯೇ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು ಎಂದು ಹೇಳಿ ಸಂಸ್ಥೆ ಮತ್ತು ವೈದ್ಯರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಆಯೋಗ ನುಡಿದಿದೆ.
ನಿರ್ಲಕ್ಷ್ಯದ ಪರಿಣಾಮ ರೋಗಿ ಶಾಶ್ವತ ಮೆದುಳಿನ ಹಾನಿಗೆ ತುತ್ತಾಗಿ ಕೆಲ ಕಾಲ ಕೋಮಾ ಸ್ಥಿತಿಯಲ್ಲಿದ್ದರು. ಕೋಮಾದಿಂದ ಹೊರಬಂದ ಬಳಿಕವೂ ಅವರ ದೇಹದ ಎಡಭಾಗ ಸಂಪೂರ್ಣ ಪಾರ್ಶವಾಯುವಿಗೆ ತುತ್ತಾಯಿತು. ಬೇರೆಯವರೊಂದಿಗೆ ಮಾತನಾಡುವ, ಆಲಿಸುವ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡ ಅವರು ಜೀವಂತ ಶವವಾಗಿ ಇರುವಂತಾಯಿತು ಎಂದು ಎನ್‌ಸಿಡಿಆರ್‌ಸಿಗೆ ಮಾಹಿತಿ ನೀಡಲಾಯಿತು. ರೋಗಿಯ ಪತ್ನಿ 2012ರಲ್ಲಿ ಈ ಸಂಬಂಧ ದೂರು ನೀಡಿದ್ದರು.
ವಾದ ಆಲಿಸಿದ ಆಯೋಗ, ರೋಗಿಯ ಸ್ಥಿತಿಗೆ ಆಸ್ಪತ್ರೆ ಹಾಗೂ ಹೃದ್ರೋಗ ತಜ್ಞ ಡಾ. ಅಶೋಕ್ ಸೇಠ್ ಕಾರಣ ಎಂದು ನುಡಿಯಿತು. ರೋಗಿಯು ತನ್ನ ಆರೋಗ್ಯ ಬಿಕ್ಕಟ್ಟಿನ ಮೊದಲು ಗಳಿಸುತ್ತಿದ್ದ ಮಾಸಿಕ ಆದಾಯ, ಆಸ್ಪತ್ರೆ ವೆಚ್ಚ, ಪ್ರಯಾಣ ವೆಚ್ಚ, ಶುಶ್ರೂಷೆ ವೆಚ್ಚ, ರೋಗಿಯ ಕುಟುಂಬಕ್ಕೆ ಉಂಟಾದ ನಷ್ಟ, ನೋವು ಮುಂತಾದ ಅಂಶಗಳನ್ನು ಪರಿಗಣಿಸಿ ಆಸ್ಪತ್ರೆ ಮತ್ತು ಅದರ ವೈದ್ಯರಿಗೆ ₹ 65 ಲಕ್ಷ ಪರಿಹಾರವನ್ನು ನೀಡುವಂತೆ ಆದೇಶಿಸಲಾಯಿತು.