ಮೈಸೂರು: ಹಿಜಾಬ್, ಕೇಸರಿ ಶಾಲು ವಿವಾದ ವಿಚಾರ ರಾಜಕೀಯ ತಿರುವು ಪಡೆದದ್ದು ಬಹಳ ನೋವಿನ ಸಂಗತಿ. ಇದು ರಾಜಕೀಯ ಸ್ವರೂಪ ಪಡೆಯೊದಕ್ಕೆ ಕಾರಣವಾದ ಬಗ್ಗೆ ತನಿಖೆ ಆಗಬೇಕು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್ ರಾಜ್ಯದಲ್ಲಿ ಇಷ್ಟೊಂದು ಕೇಸರಿ ಶಾಲು ಎಲ್ಲಿಂದ ಬಂತು..? ಲೋಡ್ ಗಟ್ಟಲೆ ಕೇಸರಿ ಶಾಲು ಹೇಗೆ ಬಂತು..? ಇದರ ಹಿಂದೆ ಯಾರಿದ್ದಾರೆ ತನಿಖೆ ಆಗಬೇಕು. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇವತ್ತಿನಿಂದ ನ್ಯಾಯಾಲಯದಲ್ಲಿ ಈ ಬಗ್ಗೆ ವಾದವಿವಾದ ಶುರುವಾಗುತ್ತೆ. ನ್ಯಾಯಾಲಯ ಎಲ್ಲಾ ವಿಚಾರಗಳನ್ನ ಗಮನಿಸಿ ದೇಶಕ್ಕೆ ಮಾದರಿಯಾದ ತೀರ್ಪು ನೀಡುತ್ತೆ ಅನ್ನುವ ನಂಬಿಕೆ ಇದೆ. ಹಿಜಾಬ್ ಇವತ್ತಿಂದ ಬಂದಿರೋದಲ್ಲ. ಬಹಳಷ್ಟು ವರ್ಷಗಳಿಂದ ಇದೆ. ಈಗ ಹಿಜಾಬ್ ಹಿಂದೆ ಹೋಗಲಿಕ್ಕೆ ಕಾರಣ ಏನು…? ಎಂದು ಪ್ರಶ್ನಿಸಿದರು.
ಬಿಜೆಪಿಯ ರೇಣುಕಾಚಾರ್ಯ ಮಹಿಳೆಯರ ಬಗ್ಗೆ ಮಾತನಾಡ್ತಾರೆ. ನಂತರ ಕ್ಷಮೆ ಕೇಳ್ತಾರೆ. ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡುವ ಇಂತವರು ರಾಜೀನಾಮೆ ಕೊಡಬೇಕು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹುಚ್ಚುಹುಚ್ಚನಾಗಿ ಮಾತನಾಡುತ್ತಾರೆ. ಹೀಗೆ ಮಾತನಾಡೋದು ಗೌರವವಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.