ಮನೆ ಯೋಗಾಸನ ವೀರಭದ್ರಾಸನ

ವೀರಭದ್ರಾಸನ

0

ಈ ಆಸನವು ಪರಶಿವನ ಕೋಪದಿಂದ ಹೊರ ಬಿದ್ದ ʼವೀರಭದ್ರʼ ಸ್ವಾಮಿಯ ಹೆಸರಿಗೆ ಅಂಕಿತವಾಗಿದೆ. ಈ “ವೀರಭದ್ರ” (ಅಂದರೆ ಪರಮ ಮಂಗಳಕರ) ಸ್ವಾಮಿಯ ಹುಟ್ಟಿನ ಬಗ್ಗೆ ಶೈವ ಪುರಾಣದಲ್ಲಿ ಹೀಗಿದೆ. ʼದಕ್ಷಬ್ರಹ್ಮʼನೆಂಬುವನು ಹಿಂದೆ ಒಂದಾನೊಂದು ಕಾಲದಲ್ಲಿ ದೊಡ್ಡ ಯಜ್ಞವನ್ನು ಕೈಗೊಂಡು, ಅದಕ್ಕಾಗಿ ವಿಷ್ಣು, ಚತುರ್ಮುಖ ಬ್ರಹ್ಮ ಮತ್ತು ಇತರ ಸಮಸ್ತ ದೇವತೆಗಳನ್ನು ಆಹ್ವಾನಿಸಿದ.

ಆದರೆ ತನ್ನ ಸ್ವಂತ ಮಗಳಾದ ʼಸತಿʼ ದೇವಿಯನ್ನು ಮತ್ತು ಆಕೆಯ ಪತಿ ಪರಶಿವನನ್ನು ವೈಮನಸ್ಯ ಭಾವದಿಂದ ಆಹ್ವಾನಿಸಲಿಲ್ಲ. ಆದರೂ, ಸತಿ ದೇವಿಯು ತನ್ನನ್ನು ಹೆತ್ತ ತಂದೆ ಕೈಗೊಂಡಿದ್ದ ಯಜ್ಞವೈಭವದಲ್ಲಿ ತಾನು ಭಾಗಿಯಾಗಲೆಳೆಸಿ, ತನ್ನ ಪತಿದೇವನಿಗಿಷ್ಟವಿಲ್ಲದಿದ್ದರೂ ತಾನಾಗಿ ಅಲ್ಲಿಗೆ ಹೋದಳು. ಆದರೆ ಅಲ್ಲಿ ನಡೆದುದೇನು ? ತನಗೂ ತನ್ನ ಪ್ರಾಣಪ್ರಿಯ ನಾದ ಪರಮೇಶ್ವರನಿಗೆ ತನ್ನ ತಂದೆಯಿಂದ ಉಂಟಾದ ಅಪಮಾನ. ದೇವ ಸಭೆಯಲ್ಲಿ ತನಗೆ ಮತ್ತು ತನ್ನ ಪತಿಗೆ ಆದಂತ ಅಪಮಾನವನ್ನು ಸಹಿಸಲಾರದೆ, ಮಹಾಯೋಗಿನಿ ಯದಾ ದಾಕ್ಷಾಯಿಣಿದೇವಿಯು ತನ್ನ ದೇಹವನ್ನು ಯೋಗಾಗ್ನಿಗೆ ಆಹುತಿಕೊಟ್ಟಳು. ದಕ್ಷನು ಉದ್ಧಟತನದಿಂದ ನಡೆದ ಆ ಅನಾಹುತವನ್ನು ಕೇಳಿ, ಮಹಾರುದ್ರನು ಕೋಪದಿಂದ ಕಿಡಿಕಿಡಿಯಾಗಿ ತನ್ನ ಜಟಾ ಜುಟದಿಂದ ಒಂದು ಕೂದಲನ್ನು ಕಿತ್ತು ನೆಲದ ಮೇಲೋಗೆದ. ಇದರ ಪರಿಣಾಮವೇ ಮಹಾ ರೌದ್ರಾವತಾರದ ʼವೀರಭದ್ರʼನ ಹುಟ್ಟು ʼಏನಪ್ಪಣೆ?ʼ ಎಂದು ತನ್ನ ಜನ್ಮದಾತನ ಪರಶಿವನನ್ನು ಬೇಡಿದೊಡನೆಯೇ, “ತತ್ ಕ್ಷಣವೇ ಭೂತಗಳಗಳೊಗೂಡಿ, ದಕ್ಷನ ಯಜ್ಞ ಶಾಲೆಯನ್ನು ಹೊಕ್ಕು, ಅಧರ್ಮ ಕ್ರಮಗಳಿಂದ ಕೂಡಿದ ಅವನ ಯಜ್ಞಕರ್ಮವನ್ನು ಧ್ವಂಸಮಾಡಿ, ಅಧರ್ಮ ಪ್ರವರ್ತಕನಾದ ಆ ದಕ್ಷನನ್ನು ನಿಗ್ರಹಿಸು” ಎಂದು ತಂದೆಯ ಆಜ್ಞೆಯನ್ನು ನೆರವೇರಿಸಿದ.

ಇತ್ತ ಮಹಾ ಪತಿವ್ರತೆಯೆನಿಸಿದ ಸತಿ ದೇವಿಯ ತನ್ನೊಡಲನ್ನು ಯೋಗಾಗ್ನಿಗೆ ಆಹುತಿ ಮಾಡುವ ಸಮಯದಲ್ಲಿ ʼಬೇರೊಂದು ದೇಹದಿಂದ ಪರಶಿವನನ್ನೇ ಪತಿಯನ್ನಾಗಿ ಪಡೆಯಬೇಕುʼ ಎಂಬ ಸಂಕಲ್ಪವನ್ನು ಮನದಲ್ಲಿ ಬೇರೂರಿಸಿದ್ದರಿಂದ ಹಿಮವಂತನ ಮಗಳಾಗಿ ಹುಟ್ಟಿ ʼಉಮಾʼ ಎಂಬ ಹೆಸರನ್ನು ತಳೆದು, ಬೆಳೆದು, ಕಡೆಗೆ ತನ್ನ ತಪೋಬಲದಿಂದ ಪರಶಿವನ ಅನುಗ್ರಹವನ್ನು ಪಡೆದಳು.

 ಸದ್ಯಪ್ರಭೃತ್ಯವನತಾಂಗಿ ತವಾಸ್ಮಿ ದಾಸಃ |

ಕ್ರೀತಃ ತಪೋಭಿರಿತಿ ವಾದಿನಿ ಚಂದ್ರಮೌಳಿ ||

                                 -ಕುಮಾರ ಸಂಭವ-ಸರ್ಗ ೫- ಕೊನೆಯ ಶ್ಲೋಕ.

 “ಹೇ ! ಸುಂದರಿ, ನೀನು ನಿನ್ನ ತಪಸ್ಸಿನಿಂದ ನನ್ನನ್ನು ನಿನ್ನವನನ್ನಾಗಿ ಮಾಡಿಕೊಂಡಿದ್ದಿ. ನಾನು ನಿನ್ನ ದಾಸನಾಗಿ ನಿನ್ನ ಇಷ್ಟವನ್ನು ನೆರವೇರಿಸುತ್ತೇನೆ.” ಎಂದು ಅಭಯ ಕೊಟ್ಟ ಪರ ಶಿವನು ಆಕೆಯನ್ನು ತನ್ನ ಅರ್ಧಂಗಿಯನ್ನಾಗಿ ಮಾಡಿಕೊಂಡ. ಈ ದಾಂಪತ್ಯದಲ್ಲಿ ʼಷಣ್ಮುಖʼ ಅಥವಾ ʼಕುಮಾರಸ್ವಾಮಿʼಯ ಜನನವಾಯಿತು. ಕುಮಾರಸ್ವಾಮಿಯ ಮೂಲಕ ದೇವತೆಗಳಿಗೆ ಶತ್ರುವಾದ ತಾರಕಾಸುರನ ವಧೆಯಾಗಿ, ದೇವ ವರ್ಗಕ್ಕೆ ಸುಖ ದೊರಕಿತು. ಈ ಕಥಾ ಭಾಗವನ್ನ ಕವಿಚಕ್ರವರ್ತಿ ಕಾಳಿದಾಸನು ತನ್ನ ʼಕುಮಾರಸಂಭವʼ ಮಹಾಕಾವ್ಯದಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ.

ಆಸನವು ಮಹೇಶ್ವರನ ಜಡೆಯ ಬಡಿತದಿಂದುರಿಸಿದ ವೀರಭದ್ರ ದೇವರ ಹೆಸರಿನಿಂದ ಪ್ರಸಿದ್ಧವಾಗಿದೆ.

ಅಭ್ಯಾಸ ಕ್ರಮ :-

೧. ಮೊದಲು ತಡಾಸನ ಬಂಗಿಯಲ್ಲಿ ನಿಲ್ಲಬೇಕು.

೨.  ಬಳಿಕ ಎರಡು ತೋಳುಗಳನ್ನು ನೀಳವಾಗಿ ಮೇಲೆ ತಲೆಯ ಮೇಲೆತ್ತಿ ಅಂಗೈಗಳೆರಡನ್ನು ಜೋಡಿಸಬೇಕು.

೩. ಅನಂತನ ಉಸಿರನ್ನು ಬಲವಾಗಿ ಒಳಕ್ಕೆಳದು, ಸ್ವಲ್ಪ ಮೇಲಕ್ಕೆ ಜಿಗಿದು, ನಡುವಣ ಅಂತರವು 4-4  1/2 ಅಡಿಗಳಿರುವಂತೆ ಕಾಲುಗಳನ್ನ ಅಗಲಿಸಿ ನಿಲ್ಲಬೇಕು.

೪. ಆಮೇಲೆ ಶ್ವಾಸವನ್ನು ಹೊರಕ್ಕೆ ಬಿಟ್ಟು, ಬಲಗಡೆ ತಿರುಗಿ, ಒಡನೆಯ ಬಲಪಾದವನ್ನು ಬಲಗಡೆಗೆ 90 ಡಿಗ್ರಿಗಳಷ್ಟು ತಿರುಗಿಸಿಟ್ಟು, ಎಡಪಾದವನ್ನು ಬಲಗಡೆಗೆ ಸ್ವಲ್ಪ ಓರೆ ಮಾಡಿರಬೇಕು. ಆ ಬಳಿಕ ಬಲ ಮಂಡಿಯನ್ನು ಭಾಗಿಸಿ ಬಲತೊಡೆಯು ನೆಲಕ್ಕೆ ಸಮಾನಾಂತರ ವಾಗುವಂತೆಯೂ, ಮೊಣಕಾಲು ನೆಲಕ್ಕೆ ಲಂಬವಾಗಿರುವಂತೆಯೂ, ಅಂದರೆ ಬಲತೊಡೆ ಕಣಕಾಲುಗಳ ನಡುವೆ ಒಂದು ಸಮಕೋನ ವಾಗುವಂತೆ ಇರಿಸಬೇಕು. ಅಲ್ಲದೆ ಬಗ್ಗಿದ ಬಲ ಮಂಡಿಯ ಬಲ ಪಾದದ ಗಿಣ್ಣಿನಿಂದ ಮುಂದುವರಿಯದೆ ಆ ಹಿಮ್ಮಡಿಯೂ ಕೂಡ ಒಂದೇ ಸರಳ ರೇಖೆಯಲ್ಲಿರುವಂತಿರಬೇಕು.

೫.  ಇದಾದ ಮೇಲೆ ಎಡಗಾಲನ್ನು ನೀಳಲವಾಗಿ ಚಾಚಿ ಅದರ ಮಂಡಿಯನ್ನು ಬಿಗಿಗೊಳಿಸಬೇಕು.

೬. ಮುಖ, ಎದೆ ಮತ್ತು ಬಲಮಂಡಿ ಇವೆಲ್ಲವೂ ಬಲಗಾಲ ದಿಕ್ಕಿನಲ್ಲಿಯೇ ಇರಬೇಕು. ಈಗ ಮುಖವನ್ನು ಮೇಲೆತ್ತಿ ಬೆನ್ನೆಲುಬನ್ನು ಹಿಗ್ಗಿಸಿ, ಜೋಡಿಸಿಟ್ಟ ಕೈಗಳ ಕಡೆಗೆ ದಿಟ್ಟಿಸಬೇಕು.

೭. ಈ ಭಂಗಿಯಲ್ಲಿ 20ರಿಂದ 30 ಸೆಕೆಂಡುಗಳ ಕಾಲ ಸಾಮಾನ್ಯ ರೀತಿ ಉಸಿರಾಟದಿಂದ ನೆಲೆಸಬೇಕು.

೮. ಮತ್ತೆ ಇದೆ ಭಂಗಿಯಲ್ಲಿ ತಿರುಗುಮುರುಗು ಮಾಡಿ, ನಾಲ್ಕನೇ ಅನುಬಂಧದಿಂದ ವಿವರಿಸಿದ ಸ್ಥಿತಿಗಳನ್ನು ಎಡಗಡೆಯೂ ನಡೆಸಬೇಕು.

೯. ಕಡೆಯಲ್ಲಿ ಉಸಿರಾಟವನ್ನು ಹೊರಕ್ಕೆ ಬಿಟ್ಟು ಹಿಂದಕ್ಕೆ ಜಿಗಿದು, ತಡಾಸನದಲ್ಲಿ ನಿಲ್ಲಬೇಕು.

(ಸೂಚನೆ : ನಿಲುವು ಬಂಗಿಗಳೆಲ್ಲವೂ ಸಾಮಾನ್ಯವಾಗಿ ಕಷ್ಟಕರ. ಅದರಲ್ಲಿಯೂ ಈ ಆಸನ ಭಂಗಿ ಮತ್ತು ವಿಶೇಷ. ಆದುದರಿಂದ ಬಲಹೀನವಾದ ಹೃದಯುಳ್ಳವರು ಈ ಆಸನದ ಅಭ್ಯಾಸಕ್ಕೆ ತೊಡಬಾರದು. ಅಲ್ಲದೆ ಶಕ್ತಿಯುತವಾದ ಹೃದಯವುಳ್ಳವರು ಕೂಡ ಈ ಹಾಸನ ಭಂಗಿಯಲ್ಲಿ ಹೆಚ್ಚು ಕಾಲ ನಿಲ್ಲಬಾರದು.)

ಪರಿಣಾಮಗಳು :-

ಈ ಆಸನದ ಭಂಗಿಯಿಂದ ಎದೆಯ ವಿಸ್ತಾರವಾಗುವುದು ಮಾತ್ರವಲ್ಲದೆ, ಇದು ನೀಳವಾದ ಉಚ್ಚಾಸ ನಿಶ್ವಾಸಗಳಿಗೆ ತುಂಬಾ ಸಹಕಾರಿಯಾಗಿದೆ. ಜೊತೆಗೆ ಈ ಅಭ್ಯಾಸವು ಭುಜಗಳ ಮತ್ತು ಬೆನ್ನಿನಲ್ಲಿಯ ಪೆಡಸನ್ನು ಹೋಗಲಾಡಿಸುತ್ತದೆ. ಕಾಲಿನ ಹರಡು ಮತ್ತು ಮಂಡಿಗಳಿಗೆ ಬಲ ಕೊಡುತ್ತವೆ. ಕತ್ತಿನಲ್ಲಿರುವ ಬಿಗಿತನವನ್ನು ಕಳೆಯುತ್ತದೆ. ಅಷ್ಟೇ ಅಲ್ಲದೆ, ಟೊಂಕಗಳಲ್ಲಿ ಶೇಖರವಾದ ಕೊಬ್ಬಿನ ಭಾಗವನ್ನು ಈ ಆಸನವು ತಗ್ಗಿಸುತ್ತದೆ.