ವಿಜಯಪುರ: ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕಿನಲ್ಲಿ ನಡೆದಿದ್ದ ರಾಜ್ಯದಲ್ಲೇ ಅತಿ ದೊಡ್ಡ ಮೊತ್ತದ ಚಿನ್ನಾಭರಣ, ನಗದು ಕಳವು ಪ್ರಕರಣವನ್ನು ಭೇದಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕ ಹಾಗೂ ಹಾಲಿ ಹುಬ್ಬಳ್ಳಿಯ ಗದಗ ರೋಡ್‌ನಲ್ಲಿರುವ ಕೋಠಾರಿ ನಗರದ ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಮಿರಿಯಾಲ(೪೧), ಹುಬ್ಬಳ್ಳಿ ಜನತಾ ಕಾಲೊನಿಯ ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ(೩೮) ಮತ್ತು ಹುಬ್ಬಳ್ಳಿ ಚಾಲುಕ್ಯ ನಗರದ ಸುನೀಲ ಮೋಕಾ(೪೦) ಎಂಬುವವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆರೋಪಿಗಳ ಬಳಿ ಇದ್ದ ೧೦.೭೫ ಕೋಟಿ ಮೌಲ್ಯದ ೧೦.೫ ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ ೨ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳ ಹಾಗೂ ಕಳುವಾದ ವಸ್ತುಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.
ಪ್ರಕರಣ ವಿವರ: ಕಳೆದ ಮೇ ೨೩ ರಿಂದ ೨೫ರ ನಡುವಿನ ಅವಧಿಯಲ್ಲಿ ಆರೋಪಿಗಳು ಮನಗೂಳಿ ಬ್ಯಾಂಕಿನ ಸೇಫ್ ಲಾಕರ್‌ನಲ್ಲಿದ್ದ ಅಂದಾಜು ೫೩.೨೬ ಕೋಟಿ ಮೌಲ್ಯದ ೫೮.೯೭ ಕೆ.ಜಿ ಬಂಗಾರದ ಆಭರಣ ಹಾಗೂ ೫,೨೦,೪೫೦ ನಗದು ಸೇರಿದಂತೆ ಒಟ್ಟು ೫೩,೩೧,೨೦,೪೫೦ ಕೋಟಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿದ್ದರು. ಬ್ಯಾಂಕಿನಲ್ಲಿದ್ದ ಚಿನ್ನಾಭರಣ ಕಳವು ಸಂಬಂಧ ಆರೋಪಿತರು ಮೂರು ತಿಂಗಳಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣ ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೇ, ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸಿದ್ದರು ಎಂದು ಹೇಳಿದರು.
ಕಳ್ಳರು ತಮ್ಮ ಗುರುತು ಪತ್ತೆ ಆಗದಂತೆ ಬ್ಯಾಂಕಿನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ಎನ್.ವಿ.ಆರ್ ತೆಗೆದುಕೊಂಡು ಹೋಗಿದ್ದರು. ಪ್ರಕರಣ ಪತ್ತೆ ಹಚ್ಚಲು ಪೊಲೀಸರ ಎಂಟು ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ವೈಜ್ಞಾನಿಕ ರೀತಿಯಿಂದ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಸಿನಿಮಾಗಳಿಂದ ಪ್ರೇರೇಪಣೆ: ಪ್ರಪಂಚದ ವಿವಿಧೆಡೆ ಈ ಹಿಂದೆ ನಡೆದಿರುವ ಅತಿ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಆರೋಪಿಗಳು ತಿಳಿದುಕೊಂಡಿದ್ದರು. ಅಲ್ಲದೇ, ಹಲವು ಬಾಲಿವುಡ್, ಹಾಲಿವುಡ್ ಸೇರಿದಂತೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ರೋಚಕ ಸಿನಿಮಾಗಳನ್ನು ನೋಡಿ ಪ್ರೇರೇಪಿತವಾಗಿ, ಅದೇ ರೀತಿ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಎಸ್.ಪಿ. ಲಕ್ಷ್ಮಣ ನಿಂಬರಗಿ ತಿಳಿಸಿದರು.














