ಮನೆ ಸುದ್ದಿ ಜಾಲ ದೇವಸ್ಥಾನ ಕಟ್ಟುವ ನೆಪದಲ್ಲಿ 20 ವರ್ಷ ವಾಸವಿದ್ದ ಮನೆ ಧ್ವಂಸ, ಬಡ ಕುಟುಂಬ ಬೀದಿಪಾಲು ಮಾಡಿದ...

ದೇವಸ್ಥಾನ ಕಟ್ಟುವ ನೆಪದಲ್ಲಿ 20 ವರ್ಷ ವಾಸವಿದ್ದ ಮನೆ ಧ್ವಂಸ, ಬಡ ಕುಟುಂಬ ಬೀದಿಪಾಲು ಮಾಡಿದ ಗ್ರಾಮಸ್ಥರು : ಚಿಕ್ಕಮಗಳೂರು

0

ತರೀಕೆರೆ ತಾಲೂಕಿನ ಎರೇಹಳ್ಳಿ ತಾಂಡ್ಯದಲ್ಲಿ  ತಮ್ಮದೇ ಮನೆಯಲ್ಲಿ ಹದಿನೆಂಟು-ಇಪ್ಪತ್ತು ವರ್ಷಗಳಿಂದ ಪುಟ್ಟ ಮನೆ, ಸುಂದರ ಕನಸುಗಳನ್ನು ಕಟ್ಟಿಕೊಂಡಿದ್ದರೋ, ನೆಮ್ಮದಿಯಿಂದ ಬದುಕಿದ್ದರೋ ಅದೇ ಮನೆಯಿಂದ ಹೊರಬಿದ್ದು ಆ ಕುಟುಂಬ ಅಕ್ಷರಶಃ ಬೀದಿಪಾಲಾಗಿದೆ. ದೇವಸ್ಥಾನ ಕಟ್ಟುವ ನೆಪದಲ್ಲಿ, ತಮ್ಮದೇ ಸಮುದಾಯದವರಿಂದಲೇ ಒಂದು ದಲಿತ ಕುಟುಂಬ ಬೀದಿಗೆ ಬಿದ್ದಿರುವ ಕರುಣಾಜನಕ ಘಟನೆ ನಡೆದಿದೆ ಎನ್ನಲಾಗಿದೆ

ಈ ಕುರಿತು ಬಡ ಕುಟುಂಬ ವಾಸವಿದ್ದ ಜಾಗಕ್ಕೆ ಸೂಕ್ತ ದಾಖಲೆಗಳಿಲ್ಲ ಎನ್ನುವ ಕಾರಣವನ್ನೇ ಅಸ್ತ್ರವಾಗಿಸಿಕೊಂಡ ಗ್ರಾಮಸ್ಥರು, ಆ ಕುಟುಂಬದ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ನ್ಯಾಯಾಲಯದಿಂದ ‘ಇಂಜಕ್ಷನ್ ಆರ್ಡರ್’ ಇದ್ದರೂ, ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಆದೇಶ ನೀಡಿದ್ದರೂ, ಕಿಡಿಗೇಡಿಗಳ ಅಟ್ಟಹಾಸಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ದೇವಸ್ಥಾನದ ಹೆಸರಿನಲ್ಲಿ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದ ಗುಂಪು, ಕೊನೆಗೂ ಆ ಮನೆಯನ್ನು ನೆಲಸಮ ಮಾಡಿಯೇ ಬಿಟ್ಟಿದೆ. ಸುಮಾರು 30ಕ್ಕೂ ಹೆಚ್ಚು ಜನರ ಗುಂಪು ಏಕಾಏಕಿ ದಾಳಿ ನಡೆಸಿದಾಗ ಅವರಲ್ಲಿ ಕಾನೂನಿನ ಭಯವೇ ಇರಲಿಲ್ಲ. ಗ್ರಾಮದ ಮಹಿಳೆಯರೇ ಸೇರಿ ಮನೆಯ ಸಿಮೆಂಟ್ ಪಿಲ್ಲರ್‌ಗಳನ್ನು ಮುರಿದು ಹಾಕಿದರೆ, ಅತ್ತ ಪುರುಷರು ಮನೆಯಲ್ಲಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಾನವೀಯತೆ ಮರೆತ ಮನುಷ್ಯರು ಅಲ್ಲಿ ಕ್ರೌರ್ಯದ ನರ್ತನವಾಡಿದ್ದಾರೆ ಎಂಬುದು ತಿಳಿದು ಬಂದಿದೆ ಎನ್ನಲಾಗುತ್ತಿದೆ.

ಈ ಘಟನೆ ಕುರಿತು ಸ್ಥಳಕ್ಕೆ ಪೊಲೀಸರು ಬಂದು ಹೋದ ಬಳಿಕ ಪರಿಸ್ಥಿತಿ ತಿಳಿಯಾಯಿತು ಅಂದುಕೊಂಡರೆ ಅದು ಆಗಲಿಲ್ಲ, ಪೊಲೀಸರು ಮರೆಯಾದ ಬೆನ್ನಲ್ಲೇ ಮತ್ತೆ ಕುಟುಂಬದ ಮೇಲೆ ಮುಗಿಬಿದ್ದ ಕಿಡಿಗೇಡಿಗಳು, ಮನೆಯ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಿನಸಿ, ಬಟ್ಟೆಬರೆ ಎಲ್ಲವೂ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ಮಣ್ಣು ಪಾಲಾಗಿವೆ. ಹಾಗೂ ನೆಲೆ ಇಲ್ಲದ ಆ ಕುಟುಂಬ ಇಂದು ಅಕ್ಷರಶಃ ಬೀದಿಗೆ ಬಿದ್ದಿದೆ. ತಲೆಯ ಮೇಲೆ ಸೂರಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ, ಪುಟ್ಟ ಮಕ್ಕಳೊಂದಿಗೆ ಮರದ ಕೆಳಗೆ ಆಶ್ರಯ ಪಡೆದಿದೆ. ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ರಮೇಶ್ ಎಂಬುವವರ ಮೇಲೆಯೂ ಈ ದೌರ್ಜನ್ಯದ ಆರೋಪ ಕೇಳಿಬಂದಿದ್ದು,  ಹೀಗಾಗಿ  ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಮುರಿದು ಹೋದ ಬದುಕನ್ನು ಮತ್ತೆ ಕಟ್ಟಿಕೊಡುವವರು ಯಾರು ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ ಎನ್ನಲಾಗುತ್ತಿದೆ.