ನವದೆಹಲಿ : ಕೊಚ್ಚಿಯಲ್ಲಿ ವಾಟರ್ ಮೆಟ್ರೋ ಯಶಸ್ಸು ಕಂಡ ಬೆನ್ನಲ್ಲೇ ದೇಶದ 18 ಮಹಾನಗರಗಳಲ್ಲಿ ವಾಟರ್ ಮೆಟ್ರೋ ಸಾರಿಗೆ ವ್ಯವಸ್ಥೆ ಪರಿಚಯಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ದೇಶದ 18 ಪ್ರಮುಖ ನಗರಗಳಲ್ಲಿ ವಾಟರ್ ಮೆಟ್ರೋ ಸಾರಿಗೆ ಪರಿಚಯಿಸಲು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ತಯಾರಿ ನಡೆಸಿದೆ. ಅಲ್ಲದೇ ಸಚಿವಾಲಯ ಈಗಾಗಲೇ ಕರಡು ರಾಷ್ಟ್ರೀಯ ಜಲ ಮೆಟ್ರೋ ನೀತಿಯನ್ನೂ ಸಿದ್ಧಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ ಉತ್ತರ ಪ್ರದೇಶದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್, ಶ್ರೀನಗರ ಮತ್ತು ಪಾಟ್ನಾವನ್ನು ವಾಟರ್ ಮೆಟ್ರೋ ಸಾರಿಗೆ ವ್ಯವಸ್ಥೆ ಪಟ್ಟಿಗೆ ಸೇರಿಸಲಾಗುತ್ತದೆ. 2ನೇ ಹಂತದಲ್ಲಿ ಅಸ್ಸಾಂನ ಎರಡು ನಗರಗಳಾದ ತೇಜ್‌ಪುರ ಮತ್ತು ದಿಬ್ರುಗಢದಲ್ಲಿ ಈ ಸಾರಿಗೆ ವ್ಯವಸ್ಥೆ ಪರಿಚಯಿಸಲಾಗುತ್ತದೆ. ವಾಟರ್ ಮೆಟ್ರೋ ಅಗ್ಗದ ಮತ್ತು ಮಾಲಿನ್ಯ ಮುಕ್ತ ಸಾರಿಗೆ ವಿಧಾನವಾಗಿದೆ. ಇದು ರಸ್ತೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. 2023 ರ ಏಪ್ರಿಲ್ 25 ರಂದು ಕೊಚ್ಚಿಯಲ್ಲಿ ಪ್ರಾರಂಭವಾದ ವಾಟರ್ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ಕೊಚ್ಚಿ ಮತ್ತು ಸುತ್ತಮುತ್ತಲಿನ ಊರಿನ ಜನರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಪ್ರಯಾಣವನ್ನು ಇದು ಒದಗಿಸುತ್ತಿದೆ. ಜೊತೆಗೆ ಪ್ರವಾಸೋದ್ಯಮವನ್ನೂ ಉತ್ತೇಜಿಸುತ್ತಿದೆ. ವಾಟರ್ ಮೆಟ್ರೋ ಯೋಜನೆ ಮೊದಲ ಹಂತದಲ್ಲಿ 2 ಮಾರ್ಗಗಳಲ್ಲಿ 8 ವಿದ್ಯುತ್ ಹೈಬ್ರಿಡ್ ದೋಣಿಗಳೊಂದಿಗೆ ನೌಕಾಯಾನ ಪ್ರಾರಂಭಿಸಿತ್ತು. ಹೈಕೋರ್ಟ್‌ನಿಂದ ವೈಪಿನ್‌ವರೆಗಿನ ಏಕಮುಖ ಪ್ರಯಾಣಕ್ಕೆ 20 ರೂ. ಇದ್ದು, ವೈಟ್ಟಿಲದಿಂದ ಕಾಕ್ಕನಾಡು ಮಾರ್ಗಕ್ಕೆ 30 ರೂ. ನಿಗದಿಪಡಿಸಲಾಗಿದೆ. ಈ ಯೋಜನೆ ಸಕ್ಸಸ್ ಕಂಡ ಬೆನ್ನಲ್ಲೇ ದೇಶಾದ್ಯಂತ ಈ ಯೋಜನೆ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

















