ಬೆಂಗಳೂರು : ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಕಾರಿನ ಎಸಿ ಆನ್ ಮಾಡಿ, ಗಾಜುಗಳನ್ನು ಪೂರ್ತಿಯಾಗಿ ಏರಿಸಿ ಮಲಗಿದ್ದ ಕ್ಯಾಬ್ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಈ ಘಟನೆ ನಡೆದಿದ್ದು, ಚಾಲಕನ ಸಾವಿನ ಸುದ್ದಿ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ನೆಲಗೆದರಹಳ್ಳಿಯ ರಸ್ತೆ ಪಕ್ಕದಲ್ಲಿ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಬಿಸಿಲು ಹೆಚ್ಚಿದ್ದರಿಂದಲೋ ಅಥವಾ ಸುಸ್ತು ಎನಿಸಿದ್ದರಿಂದಲೋ ಚಾಲಕನು ಕಾರಿನ ಎಸಿ ಆನ್ ಮಾಡಿ, ಕಿಟಕಿ ಗಾಜುಗಳನ್ನು ಪೂರ್ತಿಯಾಗಿ ಮುಚ್ಚಿ ಒಳಗೆ ಮಲಗಿದ್ದರು. ಬೆಳಿಗ್ಗೆಯಿಂದ ಸುಮಾರು ಎರಡು ಗಂಟೆಗಳ ಕಾಲ ಕಾರು ಒಂದೇ ಕಡೆ ನಿಂತಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಬಂದಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕೆಲವರು ಕಾರಿನ ಹತ್ತಿರ ಹೋಗಿ ಪರಿಶೀಲಿಸಿದಾಗ ಚಾಲಕ ಸೀಟಿನಲ್ಲಿ ಮಲಗಿರುವುದು ಕಂಡುಬಂದಿದ್ದು ಎಷ್ಟೇ ಕೂಗಿದರೂ, ಕಾರಿನ ಮೇಲೆ ತಟ್ಟಿದರೂ ಒಳಗಿದ್ದ ಚಾಲಕ ಪ್ರತಿಕ್ರಿಯೆ ನೀಡಲಿಲ್ಲ. ಅನಿವಾರ್ಯವಾಗಿ * ಸ್ಥಳೀಯರು ಕಲ್ಲಿನಿಂದ ಕಾರಿನ ಕಿಟಕಿ ಗಾಜನ್ನು ಒಡೆದು ಬಾಗಿಲು ತೆರೆದಿದ್ದಾರೆ. ಆದರೆ, ಅಷ್ಟರಲ್ಲೇ ಚಾಲಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು ಎನ್ನಲಾಗುತ್ತಿದೆ.
ನಂತರ ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಸೇರಿ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಾಲಕನನ್ನು ಪರೀಕ್ಷಿಸಿದ ವೈದ್ಯರು, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಾರಿನೊಳಗೆ ಎಸಿ ಹಾಕಿ ಗಾಜುಗಳನ್ನು ಪೂರ್ತಿ ಮುಚ್ಚಿ ಮಲಗಿದಾಗ ಉಂಟಾಗುವ ಆಮ್ಲಜನಕದ ಕೊರತೆ ಅಥವಾ ಕಾರ್ಬನ್ ಮಾನಾಕ್ಸೆಡ್ ಅನಿಲದ ಪರಿಣಾಮದ ಬಗ್ಗೆಯೂ ಸಂಶಯಗಳು ವ್ಯಕ್ತವಾಗುತ್ತಿವೆ.
ಈ ಪ್ರಕರನ ಕುರಿತು ಮೃತ ಚಾಲಕ ಯಾರು, ಎಲ್ಲಿಯವನು, ಎಂಬ ಬಗ್ಗೆ ಪೀಣ್ಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರು ಯಾವ ಕಂಪನಿಗೆ ಸೇರಿದ ಕಾರು ಓಡಿಸುತ್ತಿದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

















