ಮನೆ ಭಾವನಾತ್ಮಕ ಲೇಖನ ದುಃಖವಿಲ್ಲದೆ ಸುಖದ ಅನುಭೂತಿಯಿಲ್ಲ

ದುಃಖವಿಲ್ಲದೆ ಸುಖದ ಅನುಭೂತಿಯಿಲ್ಲ

0

ಒಂದು ಮಾತಿದೆ, ‘ಒಬ್ಬ ವ್ಯಕ್ತಿಯ ವೈಯಕ್ತಿಕ ಸಂತೋಷದ ಎತ್ತರವನ್ನು ಆತನ ದುಃಖದ ಆಳದಿಂದ ಅಳೆಯಬಹುದು’ ಎಂದು. ಸುಖ ಅಥವಾ ಸಂತೋಷ ಅದೊಂದೇ ಭಾವನೆಯಲ್ಲ. ದುಃಖ ಕೂಡಾ ಭಾವನೆಯನ್ನು ವ್ಯಕ್ತಪಡಿಸುವ ಒಂದು ದಾರಿಯೇ ಆಗಿದೆ. ಜೀವನದಲ್ಲಿದುಃಖ ಇಲ್ಲದೇ ಸಂತೋಷವಿಲ್ಲ. ಸುಖ – ದುಃಖ ಎಂಬುದು ಜೀವನವೆಂಬ ನಾಣ್ಯದ ಎರಡು ಮುಖಗಳಿದ್ದಂತೆ. ಯಾರೂ ಕೂಡಾ ದುಃಖವನ್ನು ಬಯಸುವುದಿಲ್ಲ. ಮನಸ್ಸಿಗೆ ದುಃಖ, ನೋವುಂಟಾಗಬಾರದು ಎಂದು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ ಮನುಷ್ಯ ನೋವನ್ನು ಅನುಭವಿಸದೆ ಹೋದರೆ ಸುಖದ ಮಹತ್ವ ತಿಳಿಯುವುದಿಲ್ಲ.

ಸುಖ ದುಃಖದ ನಡುವೆ

ಹೆಚ್ಚಿನ ಜನರು ಸುಖ ದುಃಖದ ನಡುವೆ ಬಾಳುವೆ ನಡೆಸುವುದನ್ನು ಅಭ್ಯಸಿಸಿಕೊಂಡಿರುತ್ತಾರೆ. ಖುಷಿ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೇ ಸಮತೋಲನದಲ್ಲಿಜೀವನ ನಡೆಸಲು ಪ್ರಯತ್ನಿಸುತ್ತಾರೆ. ದುಃಖ ಮತ್ತು ಹಳೆಯ ನೆನಪುಗಳಿಂದ ಹಲವರ ಖುಷಿಯು ನಿಯಂತ್ರಿಸಲ್ಪಡುತ್ತಿರುತ್ತದೆ ಅತಿಯಾಗಿ ಖುಷಿ ಪಡುವುದರಿಂದ ಮುಂದೆ ಬೇಸರ ಉಂಟಾಗಬಹುದೇನೋ ಎಂಬ ಭಯ ಖುಷಿಯನ್ನು ಅನುಭವಿಸಲು ಅಡ್ಡಿಪಡಿಸುತ್ತದೆ. ಆದರೆ ಭಾವನಾತ್ಮಕ ನೋವಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇರುವ ಮಾರ್ಗ ಅಂದರೆ ವೈಯಕ್ತಿಕ ಸಂಬಂಧಗಳನ್ನು ಮಿತಿಗೊಳಿಸಿಕೊಳ್ಳುವುದು.

ದುಃಖಕ್ಕೆ ಕಾರಣಗಳು ಹಲವು

ಆಸೆಯೇ ದುಃಖಕ್ಕೆ ಮೂಲ ಎಂದಿದ್ದಾರೆ ಭಗವಾನ್ ಬುದ್ಧ. ಹೌದು, ನಿಜ. ಆಸೆಗಳನ್ನು ಕಡಿಮೆ ಮಾಡಿಕೊಂಡರೆ ದುಃಖವು ದೂರವಾಗುತ್ತದೆ. ಅದಷ್ಟೇ ಅಲ್ಲ. ಹಳೆಯ ನೆನಪುಗಳನ್ನು ನೆನೆದು ಕೊರಗುವವರೂ ಹಲವರಿದ್ದಾರೆ. ಆ ನೋವಿನಲ್ಲೇ ಸುಖವನ್ನು ಅನುಭವಿಸಲು ಮರೆತಿರುತ್ತಾರೆ.

ದುಃಖ ಎಂಬುದು ಜೀವನದ ಒಂದು ಭಾಗವೇ ಆಗಿದೆ. ಪ್ರತಿನಿತ್ಯ ಸೂರ್ಯ ಪೂರ್ವದಲ್ಲಿಹುಟ್ಟಿ ಪಶ್ಚಿಮದಲ್ಲಿಅಸ್ತಂಗತವಾಗುತ್ತಾನೆ. ಅಷ್ಟರೊಳಗೆ ಸೂರ್ಯನ ಕಿರಣಗಳಿಗೆ ಹೇಗೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆಯೋ ಅದರ ಮೂಲಕ ನಮ್ಮ ಮೇಲೆ ಆಗುವ ಹಾನಿಯ ಪ್ರಮಾಣ ನಿರ್ಧಾರವಾಗುತ್ತದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೊರಗೆ ಹೋಗುವಾಗ ಛತ್ರಿ, ಸನ್ಸ್ಕ್ರೀನ್ ಲೋಶನ್ ಬಳಸುತ್ತೇವೆ. ಅದರಂತೆ ಭಾವನಾತ್ಮಕ ನೋವಿನಿಂದ ಉಂಟಾಗುವ ಹಾನಿಗೆ ನಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಯಾಕೆಂದರೆ ನೋವು, ಬೇಸರ ಎಂಬುದು ವರ ಅಥವಾ ಶಾಪವೋ ಎಂಬುದು ನಾವು ಅದನ್ನು ಯಾವ ರೀತಿ ನಡೆಸಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ.

ನೋವು ರಕ್ಷಕನಂತೆ

ನೋವು ಅನುಭವಕ್ಕೆ ಬಂದರೆ ನಮ್ಮನ್ನು ಜಾಗೃತಗೊಳಿಸುತ್ತದೆ. ಉದಾಹರಣೆಗೆ ಬೆಂಕಿಯನ್ನು ಸ್ಪರ್ಶಿಸಿದರೆ ಕೈ ಸುಡುತ್ತದೆ. ಕೈಸುಟ್ಟರೆ ನೋವು ಆಗುತ್ತದೆ ಎನ್ನುವ ಅರಿವು ಇದ್ದರೆ ಮುಟ್ಟಲು ಹೋಗುವುದಿಲ್ಲ. ಅದ ಅನುಭವಕ್ಕೆ ಬಾರದೇ ಇದ್ದರೆ ಬೆಂಕಿಯನ್ನು ಮುಟ್ಟಬಾರದು ಎನ್ನುವ ಜಾಗೃತಿ ಮೂಡುವುದಿಲ್ಲ. ಅದೇ ರೀತಿ ಮನುಷ್ಯನಿಗೆ ದುಃಖವನ್ನುಂಟು ಮಾಡುವ ಕೆಲವು ಘಟನೆಗಳು ಮತ್ತೆ ಅದನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡುತ್ತಿರುತ್ತದೆ. ಯಾವುದನ್ನು ಮಾಡಬಾರದು, ಯಾವುದನ್ನು ಮಾಡಬಾರದು ಎಂಬುದನ್ನು ಗುರುವಿನ ಸ್ಥಾನದಲ್ಲಿರುವವನು ತಿಳಿಸಿಕೊಡುವಂತೆ, ನಮ್ಮ ಬದುಕಿನಲ್ಲಿಒಮ್ಮೆ ಆದ ನೋವು ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದನ್ನು ನೆನಪಿಸುತ್ತದೆ. ಮಾತ್ರವಲ್ಲ, ಬದುಕಿನಲ್ಲಿಬರುವ ಕಷ್ಟದ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ.

ದುಃಖ ಇಲ್ಲದೆ ಸುಖವಿಲ್ಲ

ದುಃಖವನ್ನು ಅನುಭವಿಸಿರುವಿರಾದರೆ ಸಂತೋಷದ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಅಂದರೆ ಸಂತೋಷ ಮತ್ತು ನೋವಿನ ನಡುವೆ ಹೋಲಿಕೆ ಇರುವುದರಿಂದಲೇ ಅವೆರಡರ ಮಹತ್ವ ತಿಳಿಯುವುದು. ಮಾತಿಗೆ ಹೇಳುವುದಿದೆ, ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಾಗಲೇ ಆ ವ್ಯಕ್ತಿಯ ಮಹತ್ವ ತಿಳಿಯುವುದು ಎಂದು. ಹಾಗೆಯೇ ನೋವು ಹಾಗೂ ಸುಖದ ಮಹತ್ವ ಅನುಭವಕ್ಕೆ ಬರುವುದು.

ಹಿಂದಿನ ಲೇಖನಸಂಜೆ 5 ರಿಂದ 6 ಗಂಟೆಯ ಅವಧಿಯಲ್ಲಿ ಸೂರ್ಯಗ್ರಹಣ ಸಂಭವ: ನೋಡುವುದು ಹೇಗೆ ?
ಮುಂದಿನ ಲೇಖನಬಾಳಸಂಗಾತಿಯ ಆಯ್ಕೆ ಸ್ವಾತಂತ್ರವು ವೈಯಕ್ತಿಕ ಸ್ವಾತಂತ್ರ್ಯದ ಮೂಲಸಾರ: ದೆಹಲಿ ಹೈಕೋರ್ಟ್