ಬಿಸಿಸಿಐ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ತಯಾರಿ ಆರಂಭಿಸಿದ್ದು, ಇದರ ಪ್ರಯುಕ್ತ ತಂಡದ ಕೆಲವು ಆಟಗಾರರು ಜೂನ್ 7-11 ರವರೆಗೆ ಓವಲ್ ನಲ್ಲಿ ನಡೆಯಲಿರುವ WTC ಫೈನಲ್ ಗಾಗಿ ಇಂಗ್ಲೆಂಡ್ ಗೆ ಹಾರಲು ತಯಾರಿ ನಡೆಸಿದ್ದಾರೆ.
ಆರ್ ಸಿಬಿ ತಂಡ ಈಗಾಗಲೇ ಪ್ಲೇ ಆಫ್ ಪಂದ್ಯದಿಂದ ಹೊರಗುಳಿದಿರುವುದರಿಂದ ಕೊಹ್ಲಿಯ ಸಂಪೂರ್ಣ ಗಮನ ಈಗ ಲಂಡನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ಮೇಲಿದೆ. ಲಂಡನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗಾಗಿ ಮೇ 23, ಮಂಗಳವಾರ ಮುಂಜಾನೆ ಇಂಗ್ಲೆಂಡ್ ಗೆ ತೆರಳಲಿರುವ ಭಾರತೀಯ ಆಟಗಾರರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ.
ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಮೊಹಮ್ಮದ್ ಸಿರಾಜ್ ಕೂಡ ಇದೇ ವಿಮಾನದಲ್ಲಿ ಲಂಡನ್ ತಲುಪಲಿದ್ದಾರೆ. ಇಂಗ್ಲೆಂಡ್‌ಗೆ ತೆರಳಲಿರುವ ಮೊದಲ ಬ್ಯಾಚ್‌ನಲ್ಲಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮತ್ತು ಆಲ್ ರೌಂಡರ್ ಶಾರ್ದೂಲ್ ಠಾಕೂರ್, ರಾಹುಲ್ ದ್ರಾವಿಡ್ ನೇತೃತ್ವದ ಸಹಾಯಕ ಸಿಬ್ಬಂದಿ ಸೇರಿದ್ದಾರೆ.
ಇವರಲ್ಲದೆ ಡೆಲ್ಲಿ ತಂಡದ ಭರವಸೆಯ ವೇಗಿ ಮುಕೇಶ್ ಕುಮಾರ್ ಅವರು ಇತರ ಮೂವರು ಅನ್‌ಕ್ಯಾಪ್ಡ್ ವೇಗಿಗಳಾದ ಅನಿಕೇತ್ ಚೌಧರಿ, ಆಕಾಶ್ ದೀಪ್ ಮತ್ತು ಯರ್ರಾ ಪೃಥ್ವಿರಾಜ್ ಅವರೊಂದಿಗೆ ರಿಸರ್ವ್ ಆಟಗಾರರಾಗಿ ಮೊದಲ ಬ್ಯಾಚ್‌ನಲ್ಲಿ ಕೊಹ್ಲಿಯೊಂದಿಗೆ ಪ್ರಯಾಣಿಸಲಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ, ‘ಎರಡು ಅಥವಾ ಮೂರು ಬ್ಯಾಚ್ ಗಳಲ್ಲಿ ಆಟಗಾರರು ಇಂಗ್ಲೆಂಡ್ ಗೆ ತಲುಪುತ್ತಾರೆ. ಮೊದಲ ಬ್ಯಾಚ್ ನಾಳೆ ಬೆಳಗ್ಗೆ 4.30ಕ್ಕೆ ಹೊರಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನ ಪ್ಲೇಆಫ್ ಗೆ ತಲುಪಿದ ತಂಡಗಳ ಆಟಗಾರರು ನಂತರ ಇಂಗ್ಲೆಂಡ್ ಗೆ ತಲುಪುತ್ತಾರೆ. ಈ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ಕೆಎಸ್ ಭರತ್ ಮತ್ತು ಅಜಿಂಕ್ಯ ರಹಾನೆ ಸೇರಿದ್ದಾರೆ.
ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಈಗಾಗಲೇ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಎರಡು ತಿಂಗಳ ಕಾಲ ಐಪಿಎಲ್ ನಲ್ಲಿ ಆಡಿದ ನಂತರ ಭಾರತದ ಆಟಗಾರರು ಡಬ್ಲ್ಯುಟಿಸಿ ಫೈನಲ್ ಗೆ ಎಂಟ್ರಿಕೊಡಲಿದ್ದಾರೆ. ಭಾರತವು 2021 ರಲ್ಲಿ WTC ನಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ 10 ವರ್ಷಗಳಲ್ಲಿ ಮೊದಲ ಐಸಿಸಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಮೈದಾನಕ್ಕಿಳಿಯಲಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಕೆಎಸ್ ಭರತ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್.