ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿಯ ಹೆಜ್ಜೆ

0

ಬೆಂಗಳೂರು: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತ ಅತಿ ಹೆಚ್ಚು ಪದಕವನ್ನು ಮುಡಿಗೇರಿಸಿಕೊಂಡಿದೆ. ಭಾರತದ ಈ ಸಾಧನೆಯಲ್ಲಿ ಕನ್ನಡಿಗ ಕ್ರೀಡಾಪಟುವಿನ ಪಾತ್ರವೂ ಇದೆ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ. ಐಎಎಸ್ ಹುದ್ದೆಯಂತಾ ಅತ್ಯುನ್ನತ ಅಧಿಕಾರಿಯಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ ಇತಿಹಾಸ ಬರೆದಿದ್ದಾರೆ. ಹಾಸನ ಮೂಲದ ಸುಹಾಸ್ ಯತಿರಾಜ್ ಉತ್ತರ ಪ್ರದೇಶ ಲಕ್ನೋದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಬೆಳ್ಳಿಯ ಪದಕ ಗೆಲ್ಲುವ ಮೂಲಕ ಸುಹಾಸ್ ಯತಿರಾಜ್ ಐಎಎಸ್ ಹುದ್ದೆಯಲ್ಲಿದ್ದು ಈ ಅತ್ಯುನ್ನತ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹಾಸ್ ತಂದೆ ಯತಿರಾಜ್ ಶಿವಮೊಗ್ಗ ಮೂಲದವರಾಗಿದ್ದು ತಾಯಿ ಜಯಶ್ರೀ ಹಾಸನದವರಾಗಿದ್ದಾರೆ. ಸುಹಾಸ್ ಯತಿರಾಜ್ ಪತ್ನಿ ರಿತು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಸಹಾಯಕ ವಿಭಾಗಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್‌ಎಲ್ 4 ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಸದ್ಯ ವಿಶ್ವದ ನಂಬರ್ 2 ಬ್ಯಾಡ್ಮಿಂಟನ್ ಆಟಗಾರನಾಗಿರುವ ಸುಹಾಸ್ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಇದಕ್ಕೆ ತಕ್ಕನಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವಿಡ್ 19 ಹೀರೋ ಈಗ ಪ್ಯಾರಾಲಿಂಪಿಕ್ಸ್ ಹೀರೋ: 2007ರ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ನೋಯ್ಡಾದ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೊನಾವೈರಸ್‌ನ ಉತ್ತುಂಗದ ಕಾಲದಲ್ಲಿ ಜಿಲ್ಲಾಧಿಕಾರಿಯಾಗಿ ಸುಹಾಸ್ ಸಲ್ಲಿಸಿದ ಸೇವೆ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಫ್ರಂಟ್‌ಲೈನ್ ವಾರಿಯರ್ ಆಗಿ ಸುಹಾಸ್ ಅದ್ಭುತವಾಗಿ ಕೋವಿಡ್ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕರ್ತವ್ಯ ಹಾಗೂ ಕ್ರೀಡೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಸುಹಾಸ್: ಕ್ರೀಡಾಪಟುವಾಗಿ ಹಾಗೂ ಐಎಎಸ್ ಅಧಿಕಾರಿಯಾಗಿ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವಲ್ಲಿಯೂ ಸುಹಾಸ್ ಯಶಸ್ವಿಯಾದರು. ಕಳೆದ ಆರು ವರ್ಷಗಳಿಂದೀಚೆಗೆ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರನಾಗಿರುವ ಸುಹಾಸ್ ಬಳಿಕ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸುತ್ತಿರುವಂತೆಯೇ ಅಭ್ಯಾಸಕ್ಕೂ ಸಮಯವನ್ನು ನೀಡಿಕೊಂಡು ಬಂದಿದ್ದಾರೆ. ಎರಡು ಜವಾಬ್ಧಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. 38ರ ಹರೆಯದ ಆಟಗಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಲು ನಿತ್ಯವೂ ಎರಡು ಗಂಟೆಗಳ ಅಬ್ಯಾಸವನ್ನು ನಡೆಸುತ್ತಿದ್ದರು. ವೃತ್ತಿಪರ ಬ್ಯಾಡ್ಮಿಂಟನ್ ಆಗಿದ್ದೇ ರೋಚಕ ಕಥೆ: ಬಾಲ್ಯದಿಂದಲೂ ಬ್ಯಾಡ್ಮಿಂಟನ್ ಮೇಲೆ ಹೆಚ್ಚಿನ ಒಲವು ಹೊಂದಿದ್ದ ಸುಹಾಸ್ ಯತಿರಾಜ್ ಐಎಎಸ್ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಿದ್ದರು. 2016ರಲ್ಲಿ ಉತ್ತರಪ್ರದೇಶದ ಅಜಮ್‌ಘರ್ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ನಡೆದ ಕ್ರೀಡಾಕೂಟವೊಂದರಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಯತಿರಾಜ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಸುಹಾಸ್ ಯತಿರಾಜ್ ಅವರ ಗಮನ ಸೆಳೆಯಿತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಸುಹಾಸ್ ಸ್ಪರ್ಧಿಯಾಗಿ ಆಡಲು ಬಯಸಿದ್ದರು. ಇದು ಕ್ರೀಡಾಪಟುವಾಗಿ ಹೊಸ ವೃತ್ತಿ ಜೀವನವನ್ನು ಆರಂಭಿಸಲು ಪ್ರೇರಣೆಯಾಯಿತು. ಮೊದಲ ಪ್ರಯತ್ನದಲ್ಲಿಯೇ ಚಿನ್ನ: ಹೀಗೆ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರನಾಗಿ ಕ್ರೀಡಾಕ್ಷೇತ್ರಕ್ಕೆ ಕಾಲಿಟ್ಟ ಸುಹಾಸ್ ಯತಿರಾಜ್ ಅದೇ ವರ್ಷ ಅಂದರೆ 2016ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರು. ಚೀನಾದ ಬೀಜಿಂಗ್‌ನಲ್ಲಿ ನಡೆದ 2016ರ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಮೊದಲ ಪ್ರಯತ್ನದಲ್ಲಿಯೇ ಚಿನ್ದ ಪದಕ ಕೊರಳಿಗೇರಿಸಿಕೊಂಡಿದ್ದರು ಸುಹಾಸ್ ಯತಿರಾಜ್. ನಂತರ ಮುಂದಿನ ವರ್ಷಗಳಲ್ಲಿ ಜಪಾನ್ ಓಪನ್ ಹಾಗೂ ಟರ್ಕಿಶ್ ಓಪನ್‌ನಲ್ಲಿಯೂ ಭಾಗವಹಿಸಿದ ಇವರು ಅಲ್ಲಿಯೂ ಚಿನ್ನದ ಪದಕವನ್ನು ಗೆದ್ದು ಬೀಗಿದರು. ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್ ಕೋಚ್ ಗೌರವ್ ಖನ್ನಾ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಹಿಂದಿನ ಲೇಖನಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ
ಮುಂದಿನ ಲೇಖನTest Video