ಮನೆ Uncategorized ಪಂಚ ರಾಜ್ಯಗಳ ಚುನಾವಣೆಯಲ್ಲಿ ವರ್ಚ್ಯುಯಲ್ ರ್ಯಾಲಿ ನಡೆಸಲು ಕಾಂಗ್ರೆಸ್ ತಯಾರಿ

ಪಂಚ ರಾಜ್ಯಗಳ ಚುನಾವಣೆಯಲ್ಲಿ ವರ್ಚ್ಯುಯಲ್ ರ್ಯಾಲಿ ನಡೆಸಲು ಕಾಂಗ್ರೆಸ್ ತಯಾರಿ

0

ನವದೆಹಲಿ: ಕೋವಿಡ್ ‌-19  ಮತ್ತು ಓಮೈಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣಕ್ಕೆ ಉತ್ತರ ಪ್ರದೇಶ, ಉತ್ತರಖಂಡಾ , ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ  ಚುನಾವಣಾ ರ್‍ಯಾಲಿಗಳನ್ನು ರದ್ದು ಮಾಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಎಲ್ಲಾ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ. ದೊಡ್ಡ ಮಟ್ಟದಲ್ಲಿ ವರ್ಚ್ಯುಯಲ್ ರ್ಯಾಲಿ ಗಳನ್ನು ನಡೆಸಲು ಮುಂದಾಗಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ಅದೇ ವೇಳೆ ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಇನ್ನಷ್ಟು ಹೆಚ್ಚಾಗಬಹುದು ಎಂದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಜನವರಿ 15ರವರೆಗೆ ಚುನಾವಣಾ ರ್ಯಾಲಿ, ಸೈಕಲ್ ರ್‍ಯಾಲಿ ಮತ್ತು ಬೈಕ್ ರ್ಯಾಲಿ ಗಳನ್ನು ನಡೆಸುವಂತಿಲ್ಲ. ಸಭೆ, ಸಮಾರಂಭ, ಸಮಾವೇಶಗಳನ್ನು ಕೂಡ ನಡೆಸುವಂತಿಲ್ಲ ಎಂದು ನಿರ್ಬಂಧ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಈಗ ದೊಡ್ಡ ಮಟ್ಟದಲ್ಲಿ ವರ್ಚ್ಯುಯಲ್ ರ್‍ಯಾಲಿಗಳನ್ನು ನಡೆಸಲು ಮುಂದಾಗಿದೆಯಲ್ಲದೆ ಅದಕ್ಕಾಗಿ ದೆಹಲಿಯ ರಕಫ್ ಗಂಜ್ ರಸ್ತೆಯಲ್ಲಿರುವ ತನ್ನ ವಾರ್ ರೂಂನಲ್ಲಿ ಭರದ ಸಿದ್ದತೆಯನ್ನೂ ನಡೆಸಿದೆ.

ಕೇಂದ್ರ ಚುನಾವಣಾ ಆಯೋಗ ರ್ಯಾಲಿ ಗಳನ್ನು ನಿರ್ಬಂಧಿಸುವ ಮೊದಲೇ ಕಾಂಗ್ರೆಸ್ ಪಕ್ಷ ಕೋವಿಡ್ ‌-19 ಮತ್ತು ಓಮೈಕ್ರಾನ್ ಸೋಂಕು ತೀವ್ರವಾಗಿ ಹರಡುತ್ತಿರುವ ಕಾರಣಕ್ಕೆ ಚುನಾವಣಾ ರ್ಯಾಲಿ ಗಳನ್ನು ಮಾಡುವುದಿಲ್ಲ ಎಂದು ಘೋಷಿಸಿತ್ತು. ಮೊದಲಿಗೆ ಉತ್ತರ ಪ್ರದೇಶದಲ್ಲಿ ಚುನಾವಣಾ ರ್‍ಯಾಲಿಗಳನ್ನು ಮಾಡುವುದಿಲ್ಲ ಎಂದಿದ್ದ ಕಾಂಗ್ರೆಸ್ ನಂತರ ಉತ್ತರಖಂಡಾದಲ್ಲೂ ಚುನಾವಣಾ ರ್‍ಯಾಲಿಗಳನ್ನು ರದ್ದುಗೊಳಿಸಲು ನಿರ್ಧರಿಸಿತು. ಆಮೇಲೆ ಪಂಜಾಬ್, ಗೋವಾ ಮತ್ತು ಮಣಿಪುರದಲ್ಲೂ ಚುನಾವಣಾ ರ್ಯಾಲಿ ಗಳನ್ನು ರದ್ದುಗೊಳಿಸಿತು. ಕಾಂಗ್ರೆಸ್ ಪಕ್ಷದ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅಲ್ಲದೆ ಇದು ಉಳಿದ ಪಕ್ಷಗಳು ಕೂಡ ಚುನಾವಣಾ ರ್ಯಾಲಿ ಗಳನ್ನು ರದ್ದು ಮಾಡುವಂತೆ ಒತ್ತಡ ಸೃಷ್ಟಿಸಿತು.

ಇತ್ತೀಚೆಗೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಹಾಗೂ ಇನ್ನಿತರ ಕಡೆ ನಡೆದ ಮಹಿಳೆಯರ ಮ್ಯಾರಥಾನ್ ಗಳಿಗೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.‌ ವಿಶೇಷವಾಗಿ ‘ಬಿಜೆಪಿ ಅಥವಾ ಮೋದಿ ಮತದಾರರು’ ಎಂದು ಪರಿಗಣಿಸಲ್ಪಟ್ಟಿದ್ದ ಯುವತಿಯರು ಮ್ಯಾರಥಾನ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಆದರೆ ಸಾವಿರಾರು ಮಹಿಳೆಯರು ಸೇರುತ್ತಿದ್ದ ಸಂದರ್ಭದಲ್ಲಿ ಕೆಲವರು ಮಾಸ್ಕ್ ಧರಿಸುತ್ತಿರಲಿಲ್ಲ. ಸಾಮಾಜಿಕ ಅಂತರ ಕಾಪಾಡುತ್ತಿರಲಿಲ್ಲ. ಇದರಿಂದ ಮುಂದೆ ದೊಡ್ಡ ಅನಾಹುತ ಆಗಬಹುದೆಂದು ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷ ಅದರಲ್ಲೂ ವಿಶೇಷವಾಗಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ನಡೆಸಲುದ್ದೇಶಿಸಿದ್ದ ‘ಲಡ್ಕಿ ಹೂ, ಲಾಡ್ ಸಕ್ತಿ ಹೂ’ ಮ್ಯಾರಥಾನ್ ಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದರು.

ಹಿಂದಿನ ಲೇಖನವಿಧಾನ ಪರಿಷತ್ ಸಚಿವಾಲಯದ ಕಚೇರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ದಿಢೀರ್ ಭೇಟಿ, ಪರಿಶೀಲನೆ.
ಮುಂದಿನ ಲೇಖನಜ.31ರವರೆಗೂ ಬೆಂಗಳೂರಿನಲ್ಲಿ ಶಾಲೆಗಳು ಬಂದ್.