ಟಾಲಿವುಡ್ ನಟ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಜಗತ್ತಿನಾದ್ಯಂತ ಭರ್ಜರಿಯಾಗಿ ತೆರೆಕಂಡಿರುವ ಈ ಚಿತ್ರ, ಮೊದಲ ದಿನವೇ ಗಳಿಕೆಯಲ್ಲಿ ನೂರರ ಗಡಿ ದಾಟುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ್ ತಾನೇ ಎಂಬುದನ್ನು ಸಾಬೀತುಪಡಿಸಿದೆ. ರಾಮ್ ಚರಣ್ ಮಾಸ್ ಕ್ರೇಜ್‌ಗೆ ಗಳಿಕೆ ಜೊರಾಗಿಯೇ ಆಗಿದೆ. ಚಿತ್ರಮಂದಿರಗಳಲ್ಲಿ ‘ಪೆದ್ದಿ’ ಮೊದಲ ದಿನ ಅದ್ದೂರಿಯಾಗಿ ತೆರೆಕಂಡಿತು. ಹೈದರಾಬಾದ್, ಬೆಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಮುಂಜಾನೆಯ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಪರಿಣಾಮ ಸಿನಿಮಾ ಒಂದೇ ದಿನಕ್ಕೆ ವಿಶ್ವಾದ್ಯಂತ ಬರೋಬ್ಬರಿ 112.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.

ಈ ಕುರಿತು ರಾಮ್ ಚರಣ್ ಅವರ ಅದ್ಭುತ ನಟನೆ ಮತ್ತು ಸಿನಿಮಾದ ಮಾಸ್ ಎಲಿಮೆಂಟ್‌ಗಳಿಗೆ ಫಿದಾ ಆಗಿರುವ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬೀಳುತ್ತಿದ್ದಾರೆ. ಮೊದಲ ದಿನ ಸಿನಿಮಾಗೆ ಸಿಕ್ಕಿದ್ದು ಬರೋಬ್ಬರಿ 12,412 ಶೋಗಳು. ಭಾರರದಲ್ಲಿ ಈ ಸಿನಿಮಾ ಮೊದಲ ದಿನ ನೆಟ್ ಕಲೆಕ್ಷನ್ 69.50 ಕೋಟಿ ರೂಪಾಯಿ. ಭಾರತದಲ್ಲಿ ಇದುವರೆಗೆ ಒಟ್ಟು 82.49 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ. ವಿಶ್ವಾದ್ಯಂತ ಈ ಸಿನಿಮಾ 30.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಈ ಸಿನಿಮಾ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವುದು ಖಚಿತ ಎನ್ನಲಾಗುತ್ತಿದೆ.

ಕೇವಲ ಮೊದಲ ದಿನವೇ ಈ ರೇಂಜ್‌ಗೆ ಅಬ್ಬರಿಸಿರುವ ‘ಪೆದ್ದಿ’, ವೀಕೆಂಡ್‌ನಲ್ಲಿ ಇನ್ನೂ ದೊಡ್ಡ ಮಟ್ಟದ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ. ಸದ್ಯಕ್ಕಂತೂ ಚರಣ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಸಕ್ಸಸ್ ಅನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ‘ಆರ್ಆರ್ಆರ್ ಬಳಿಕ ರಾಮ್ ಚರಣ್ ಅವರ ‘ಆಚಾರ್ಯ’ ಹಾಗೂ ‘ಗೇಮ್ ಚೇಂಜರ್’ ಸಿನಿಮಾಗಳು ಬಂದವು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದವು. ಹೀಗಾಗಿ, ಅವರಿಗೆ ಒಂದು ದೊಡ್ಡ ಗೆಲುವಿನ ಅಗತ್ಯ ಇತ್ತು. ಕೆಲವರು ‘ಪೆದ್ದಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.


















