ಬೆಂಗಳೂರು, ಜೂನ್ 5: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕೆರೆಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ನಗರದ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಕೊಮ್ಮಘಟ್ಟದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜ್ಯೋತಿ (29) ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಸರಗೂರು ನಿವಾಸಿಯಾಗಿದ್ದರು. ಜ್ಯೋತಿ ಹಾಗೂ ಶರತ್ ಕುಮಾರ್ ದಂಪತಿ ಕೊಮ್ಮಘಟ್ಟದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಗೆ ನಾಲ್ಕು ವರ್ಷದ ಮಗುವಿದೆ.

ಶರತ್ ಕುಮಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಪತ್ನಿಗೆ ವರದಕ್ಷಿಣೆ ವಿಚಾರವಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಜ್ಯೋತಿ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ಕಾರಣದಿಂದ ಮನನೊಂದಿದ್ದ ಜ್ಯೋತಿ ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರಟು ಹೋಗಿದ್ದರು ಎನ್ನಲಾಗಿದೆ.
ಗುರುವಾರ ಬೆಳಗಿನ ಜಾವ ಕೊಮ್ಮಘಟ್ಟ ಕೆರೆಯಲ್ಲಿ ಮಹಿಳೆಯೊಬ್ಬರ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಂಬಳಗೋಡು ಪೊಲೀಸರು ಪರಿಶೀಲನೆ ನಡೆಸಿದಾಗ, ಅದು ಜ್ಯೋತಿ ಅವರ ಮೃತದೇಹ ಎಂಬುದು ದೃಢಪಟ್ಟಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದಲ್ಲದೆ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆ ದಿಕ್ಕಿನಲ್ಲಿಯೂ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.


















