ನವದೆಹಲಿ : ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಪಿಂಚಣಿದಾರರಿಗೆ ಶೇ. 2ರಷ್ಟು ಡಿಎ ಹೆಚ್ಚಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಒಟ್ಟು ತುಟ್ಟಿ ಭತ್ಯೆ ಶೇ. 58ರಿಂದ ಮೂಲ ವೇತನದ ಶೇ. 60ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ಡಿಎ ಜನವರಿ 2026ರಿಂದ ಅನ್ವಯವಾಗಲಿದೆ. ಪಿಂಚಣಿದಾರರಿಗೂ ಇದು ಅನ್ವಯಿಸುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ (ಸಿಪಿಐ-ಐಡಬ್ಲ್ಯೂ) ಬದಲಾವಣೆಗಳ ಆಧಾರದ ಮೇಲೆ ವರ್ಷಕ್ಕೆ 2 ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುವುದು. ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಮತ್ತೊಮ್ಮೆ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಈ ತುಟ್ಟಿ ಭತ್ಯೆ ಹೆಚ್ಚಳವು ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ವಾರ್ಷಿಕವಾಗಿ ಹೆಚ್ಚುವರಿಯಾಗಿ 6,791 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಈ ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ 30,000 ರೂ. ಮೂಲ ವೇತನ ಹೊಂದಿರುವ ಉದ್ಯೋಗಿಗೆ ಪರಿಷ್ಕರಣೆಯ ನಂತರ ತಿಂಗಳಿಗೆ 600 ರೂ. ಹೆಚ್ಚಳವಾಗುತ್ತದೆ. ನೌಕರರ ಗುಂಪುಗಳು ವೇತನ ರಚನೆಯಲ್ಲಿ ವ್ಯಾಪಕ ಬದಲಾವಣೆಗಳಿಗೆ ಕರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಈ ಬೇಡಿಕೆಗಳು ಪ್ರಸ್ತಾವಿತ 8ನೇ ವೇತನ ಆಯೋಗಕ್ಕೆ ಸಂಬಂಧಿಸಿವೆ.
ಸಂಪುಟದ ಪ್ರಕಟಣೆಯ ಪ್ರಕಾರ, ಈ ವರ್ಷದ ಜನವರಿ 1ರಿಂದ ಈ ಹೆಚ್ಚಳ ಅನ್ವಯವಾಗಲಿದೆ. ಅಂದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕೆಲವು ತಿಂಗಳ ಬಾಕಿ ವೇತನವನ್ನು ಕೂಡ ಪಡೆಯಲಿದ್ದಾರೆ. ಹಣದುಬ್ಬರದ ಪರಿಣಾಮವನ್ನು ಸರಿದೂಗಿಸುವ ಗುರಿಯನ್ನು ಹೊಂದಿರುವ ಈ ಹೆಚ್ಚಳವು ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುವ ಉದ್ದೇಶವನ್ನು ಹೊಂದಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ 2025ರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಈ ನಿರ್ಧಾರವು ಜುಲೈ 1, 2025ರಿಂದ ಜಾರಿಗೆ ಬಂದಿತ್ತು.














