ಮನೆ ಸುದ್ದಿ ಜಾಲ ಪೋಸ್ಟ್ ಆಫೀಸ್’ಗೆ   ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ...

ಪೋಸ್ಟ್ ಆಫೀಸ್’ಗೆ   ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಪತ್ತೆ!

0

ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದೇಶಿ ಮೂಲದ ಹೈಟೆಕ್ ಡ್ರಗ್ಸ್ ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಮತ್ತೆ ಬಯಲಿಗೆಳೆದಿದ್ದಾರೆ. ಅಮೆರಿಕ ಮತ್ತು ಥಾಯ್ಲೆಂಡ್ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಪಾರ್ಸೆಲ್ ಮೂಲಕ ಕಳುಹಿಸಲಾಗಿದ್ದ ಭಾರೀ ಪ್ರಮಾಣದ ಮಾದಕ ವಸ್ತುವನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸಾಮಾನ್ಯ ತಿಂಡಿ ತಿನಿಸುಗಳ ‘ಸ್ನಾಕ್ಸ್ ಬಾಕ್ಸ್’ ಒಳಗೆ ಅತ್ಯಂತ ಕುಶಲತೆಯಿಂದ ಅಡಗಿಸಿಡಲಾಗಿದ್ದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಅಂಚೆ ಇಲಾಖೆಯೇ ಡ್ರಗ್ಸ್ ಜಾಲದ ಪ್ರಮುಖ ಗುರಿ

ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಕೆಲವು ಪಾರ್ಸೆಲ್ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಂಚೆ ಸಿಬ್ಬಂದಿ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಸೆಲ್ ಪರಿಶೀಲನೆ ನಡೆಸಿದ ವೇಳೆ ಹೈಡ್ರೋ ಗಾಂಜಾ ಪತ್ತೆಯಾಗಿದೆ.ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಅಂಚೆ ಇಲಾಖೆ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಐಷಾರಾಮಿ ಡ್ರಗ್ಸ್ ಸಾಗಣೆ ಮಾಡುವ ಜಾಲ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ಮಾದರಿಯಲ್ಲಿ ಈ ಹಿಂದೆಯೂ ಸಿಸಿಬಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ನೆದರ್ಲ್ಯಾಂಡ್ಸ್, ಯುಎಸ್ ಹಾಗೂ ಯುಕೆ ಮೂಲದ ಸುಮಾರು 21 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುತ್ತಿದ್ದ 5 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಹಾಗೂ ಎಂಡಿಎಂಎ ಕ್ರಿಸ್ಟಲ್ಗಳನ್ನು ಜಪ್ತಿ ಮಾಡಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿತ್ತು.

ಸದ್ಯ ಈ ಹೊಸ ಪ್ರಕರಣ ಸಂಬಂಧ ಡ್ರಗ್ಸ್ ಪಾರ್ಸೆಲ್ ಯಾವ ವ್ಯಕ್ತಿಯ ಹೆಸರಿಗೆ ಬುಕ್ ಆಗಿತ್ತು ಹಾಗೂ ಬೆಂಗಳೂರಿನಲ್ಲಿ ಇದರ ಅಂತಿಮ ರಿಸೀವರ್ಸ್ ಯಾರು ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.