ಬಾಲಿವುಡ್‌ನಲ್ಲಿ ತಂದೆ–ಮಗ ಜೋಡಿಗಳ ಹಲವಾರು ಉದಾಹರಣೆಗಳಿವೆ. ಕೆಲವು ನಿರ್ದೇಶಕರು ತಮ್ಮ ಮಕ್ಕಳನ್ನು ನಟರಾಗಿ ಪರಿಚಯಿಸಿ ಯಶಸ್ಸು ಕಂಡಿದ್ದರೆ, ಕೆಲವರು ನಿರೀಕ್ಷಿತ ಫಲ ಪಡೆಯಲು ವಿಫಲರಾಗಿದ್ದಾರೆ. ಅಂತಹವರ ಕುರಿತು ಇದೀಗ ಹಿರಿಯ ನಿರ್ಮಾಪಕ ವಾಶು ಭಗ್ನಾನಿ ಗಂಭೀರ ಆರೋಪ ಮಾಡಿದ್ದಾರೆ.
ವರುಣ್ ಧವನ್ ಮತ್ತು ಅವರ ತಂದೆ, ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರನ್ನು ಉದ್ದೇಶಿಸಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅಪ್ಪ–ಮಗನನ್ನು ನಂಬಿ ನಾನು ದೊಡ್ಡ ನಷ್ಟ ಅನುಭವಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ಡೇವಿಡ್ ಧವನ್ ಅವರು 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಕಾಮಿಡಿ ಮತ್ತು ಫ್ಯಾಮಿಲಿ ಸಿನಿಮಾಗಳನ್ನು ನೀಡಿದ ನಿರ್ದೇಶಕರಾಗಿದ್ದರು. ನಂತರ ಅವರು ತಮ್ಮ ಮಗ ವರುಣ್ ಧವನ್ ಅವರನ್ನು ಕೇಂದ್ರವಾಗಿಸಿಕೊಂಡು ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ 90ರ ದಶಕದಲ್ಲಿ ತಮ್ಮದೇ ನಿರ್ದೇಶನದ ಸಿನಿಮಾಗಳ ಸೀಕ್ವೆಲ್‌ಗಳನ್ನು ವರುಣ್ ಧವನ್ ಅವರನ್ನು ನಾಯಕನಾಗಿ ತೆಗೆದುಕೊಂಡು ನಿರ್ಮಿಸುತ್ತಿದ್ದು, ಅವು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ವಾಶು ಭಗ್ನಾನಿ ಅವರು “ಕೂಲಿ ನಂಬರ್ 1” ಸಿನಿಮಾ ನಿರ್ಮಾಣಕ್ಕಾಗಿ ಡೇವಿಡ್ ಧವನ್ ಅವರಿಗೆ ಸುಮಾರು 70 ಕೋಟಿ ರೂಪಾಯಿ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ ಆ ಚಿತ್ರದ ಮೂಲಕ ತಾವು ಸುಮಾರು 27 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
“ಕೂಲಿ ನಂಬರ್ 1” ಸಿನಿಮಾ ಫ್ಲಾಪ್ ಆದ ನಂತರ ಡೇವಿಡ್ ಧವನ್ ಅವರು ತಮ್ಮೊಂದಿಗೆ ಮಾತನಾಡಿ, ಆಗಿರುವ ನಷ್ಟವನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದರು ಎಂದು ಭಗ್ನಾನಿ ಹೇಳಿದ್ದಾರೆ. ಜೊತೆಗೆ “ಬೀವಿ ನಂಬರ್ 1” ಸಿನಿಮಾವನ್ನು ಮತ್ತೆ ಒಟ್ಟಾಗಿ ಮಾಡೋಣ ಎಂದು ಹೇಳಿದ್ದರಂತೆ.
ಆದರೆ ನಂತರ ಡೇವಿಡ್ ಧವನ್ ಟಿಪ್ಸ್ ಸಂಸ್ಥೆಯೊಂದಿಗೆ ಸೇರಿ ಹೊಸ ಸಿನಿಮಾ ಮಾಡಿದ್ದು ಮಾತ್ರವಲ್ಲದೆ, ತಮ್ಮದೇ ನಿರ್ಮಾಣದ “ಬೀವಿ ನಂಬರ್ 1” ಚಿತ್ರದ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿದ್ದಾರೆ ಎಂದು ವಾಶು ಭಗ್ನಾನಿ ಆರೋಪಿಸಿದ್ದಾರೆ.
ಇತ್ತೀಚೆಗೆ ವರುಣ್ ಧವನ್ ಅಭಿನಯದ “ಹೇ ಜವಾನಿ ತೋ ಇಷ್ಕ್ ಹೋನಾ ಹೈ” ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ. ಆ ಸಿನಿಮಾದಲ್ಲಿ “ಚುನರಿ ಚುನರಿ” ಹಾಡನ್ನು ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಗ್ನಾನಿ ಅವರು ಚಿತ್ರ ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ವರುಣ್ ಧವನ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


















