ಮನೆ ರಾಷ್ಟ್ರೀಯ ಜ್ಞಾನವಾಪಿ ಮಸೀದಿ ವಿವಾದ: ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಧೀಶರಿಗೆ ಬೆದರಿಕೆ ಪತ್ರ

ಜ್ಞಾನವಾಪಿ ಮಸೀದಿ ವಿವಾದ: ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಧೀಶರಿಗೆ ಬೆದರಿಕೆ ಪತ್ರ

0

ವಾರಾಣಸಿ (Varanasi): ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಪತ್ರ ಬಂದಿದೆ.

ಜಡ್ಜ್‌ಗೆ ಬೆದರಿಕೆ ಪತ್ರ ಬಂದಿರುವುದನ್ನು ವಾರಾಣಸಿ ಪೊಲೀಸ್ ಆಯುಕ್ತ ಎ. ಸತೀಶ್ ಗಣೇಶ್ ದೃಢಪಡಿಸಿದ್ದು, ಪೊಲೀಸ್ ಉಪ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಸೀದಿ ಆವರಣದೊಳಗೆ ಸಮೀಕ್ಷೆ, ವಿಡಿಯೋ ಚಿತ್ರೀಕರಣ ಮಾಡುವಂತೆ ಆದೇಶ ನೀಡಿದ್ದ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಬೆದರಿಕೆ ಪತ್ರ ಬಂದಿರುವುದಾಗಿ ಉತ್ತರ ಪ್ರದೇಶ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಖಾಸಿಫ್ ಅಹ್ಮದ್ ಸಿದ್ದಿಖಿ ಎಂಬ ವ್ಯಕ್ತಿಯು ‘ಆಗಜ್ ಮೂವ್‌ಮೆಂಟ್’ ಸಂಘಟನೆಯ ಪರವಾಗಿ ಕೈಬರಹದಲ್ಲಿ ಬರೆದಿರುವ ಬೆದರಿಕೆ ಪತ್ರ ರಿಜಿಸ್ಟರ್ ಪೋಸ್ಟ್ ಮೂಲಕ ತಮ್ಮ ಕೈಸೇರಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಡಿಜಿಪಿ ಹಾಗೂ ವಾರಾಣಸಿಯ ಪೊಲೀಸ್ ಕಮಿಷನರೇಟ್‌ಗೆ ಪತ್ರದ ಮೂಲಕ ಜಡ್ಜ್ ಮಾಹಿತಿ ನೀಡಿದ್ದಾರೆ.

ಸದ್ಯ ಜಡ್ಜ್ ರವಿ ಕುಮಾರ್ ದಿವಾಕರ್ ಅವರ ಭದ್ರತೆಗೆ 9 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.