ನವದೆಹಲಿ : ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, ನ್ಯಾಯಾಧೀಕರಣ ರಚನೆಗೆ ಸೂಚಿಸಿದೆ. ಈ ಬಗ್ಗೆ ತೀರ್ಪು ನೀಡಿರುವ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಪೀಠ, ಒಂದು ತಿಂಗಳ ಒಳಗೆ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರಕ್ಕೆ ತಿಳಿಸಿದೆ. ಕಳೆದ ಡಿಸೆಂಬರ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ನ್ಯಾಯಾಧೀಕರಣ ರಚನೆಗೆ ಆದೇಶಿಸುವ ಮೂಲಕ ಕರ್ನಾಟಕ ಸರ್ಕಾರದ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಕರಣ ರಚನೆ ಬೇಡ, ಮಾತುಕತೆ ಮೂಲಕ ವಿವಾದ ಬಗೆಹರಿಸುಕೊಳ್ಳುತ್ತೇವೆ ಎಂದು ಕರ್ನಾಟಕ ಹೇಳಿತ್ತು. ಆದರೆ ನ್ಯಾಯಾಧೀಕರಣ ರಚಿಸುವಂತೆ ತಮಿಳುನಾಡು ವಾದಿಸಿತ್ತು. ತಮಿಳುನಾಡು ಸರ್ಕಾರದ ವಾದ ಪುರಸ್ಕರಿಸಿರುವ ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ಪ್ರಕಟಿಸಿದೆ.
ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕದಿಂದ ಚೆಕ್ ಡ್ಯಾಮ್‌ಗಳು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನೆರೆ ರಾಜ್ಯ ತಮಿಳುನಾಡು ಆಕ್ಷೇಪಿಸಿತ್ತು. ಇದು ತಮಿಳುನಾಡಿನ ಉತ್ತರ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ ಮುಂತಾದ ಕಡೆ ನೀರಿನ ಹರಿವನ್ನು ಕುಂಠಿತಗೊಳಿಸುತ್ತದೆ ಎಂದು ವಾದಿಸಿತ್ತು. 1892ರ ಮೈಸೂರು-ಮದ್ರಾಸ್ ಒಪ್ಪಂದದ ಪ್ರಕಾರ, ಕರ್ನಾಟಕವು ಕೆಳಭಾಗದ ರಾಜ್ಯದ ಅನುಮತಿಯಿಲ್ಲದೆ.
ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ ಎಂದು ತಮಿಳುನಾಡು ಪ್ರತಿಪಾದಿಸಿತ್ತು. ಆದರೆ ಇದಕ್ಕೆ ಕೌಂಟರ್ ಕೊಟ್ಟಿದ್ದ ಕರ್ನಾಟಕ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಯೋಜನೆಗಳು ಇರುವುದರಿಂದ 1892ರ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಮತ್ತು ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಸುವ ಹಕ್ಕಿದೆ ಎಂದು ಹೇಳಿತ್ತು.















