ಮನೆ ರಾಜ್ಯ ಹೋಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ..!

ಹೋಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ..!

0

ಬೆಂಗಳೂರು : ಮುಂಬರುವ ಹೋಳಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬೀದರ್ ಹಾಗೂ ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ನಡುವಿನ ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ರೈಲುಗಳ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಸ್‌ಎಂವಿಟಿ ಬೆಂಗಳೂರಿನಿಂದ ಪ್ರತಿ ಶುಕ್ರವಾರ ಮತ್ತು ಭಾನುವಾರ ಹೊರಡುವ ರೈಲು ಸಂಖ್ಯೆ 06539 ಎಸ್‌ಎಂವಿಟಿ ಬೆಂಗಳೂರು-ಬೀದರ್ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ಈ ಮೊದಲು ಫೆ.27ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಇದೀಗ ಇದರ ಸೇವೆಯನ್ನು ಮಾ.1ರಿಂದ ಮಾ.29ರವರೆಗೆ ವಿಸ್ತರಿಸಲಾಗಿದೆ.

ಬೀದರ್ ನಿಲ್ದಾಣದಿಂದ ಪ್ರತಿ ಶನಿವಾರ ಮತ್ತು ಸೋಮವಾರ ಹೊರಡುವ ರೈಲು ಸಂಖ್ಯೆ 06540 ಬೀದರ್ – ಎಸ್‌ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಫೆ.28ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದೀಗ ಇದರ ಸಂಚಾರವನ್ನು ಮಾ.2ರಿಂದ ಮಾ.30ರವರೆಗೆ ವಿಸ್ತರಿಸಲಾಗಿದೆ. ವಿಸ್ತೃತ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ ತಲಾ 9 ಟ್ರಿಪ್‌ಗಳನ್ನು ಪೂರೈಸಲಿವೆ.

ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಪ್ರತಿ ಶನಿವಾರ ಹೊರಡುವ ರೈಲು ಸಂಖ್ಯೆ 06207 ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ಈ ಮೊದಲು ಫೆ.28ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಈ ರೈಲಿನ ಸೇವೆಯನ್ನು ಮಾ.7ರಿಂದ ಮಾ.28ರವರೆಗೆ ವಿಸ್ತರಿಸಲಾಗಿದೆ.

ಕಲಬುರಗಿಯಿಂದ ಪ್ರತಿ ಭಾನುವಾರ ಹೊರಡುವ ರೈಲು ಸಂಖ್ಯೆ 06208 ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಈ ಮೊದಲು ಮಾ.1ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಈ ರೈಲಿನ ಸೇವೆಯನ್ನು ಮಾ.8ರಿಂದ ಮಾ.29ರವರೆಗೆ ವಿಸ್ತರಿಸಲಾಗಿದೆ. ವಿಸ್ತೃತ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ ತಲಾ 4 ಟ್ರಿಪ್‌ಗಳನ್ನು ನಡೆಸಲಿವೆ.

ಸಾಂತ್ರಾಗಾಚಿ – ಯಲಹಂಕ ವಿಶೇಷ ರೈಲು ವಿಸ್ತರಣೆ – ಹೋಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ಅನುಕೂಲಕ್ಕಾಗಿ ಆಗ್ನೇಯ ರೈಲ್ವೆಯು ಸಾಂತ್ರಾಗಾಚಿ ಮತ್ತು ಯಲಹಂಕ ನಡುವಿನ ವಿಶೇಷ ರೈಲು ಸೇವೆಯನ್ನು ಸಹ ವಿಸ್ತರಿಸಿದೆ. ಸಾಂತ್ರಾಗಾಚಿಯಿಂದ ಪ್ರತಿ ಗುರುವಾರ ಹೊರಡುವ ರೈಲು ಸಂಖ್ಯೆ 02863 ಸಾಂತ್ರಾಗಾಚಿ-ಯಲಹಂಕ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ಈ ಮೊದಲು ಫೆ.26ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಈಗ ಇದನ್ನು ಮಾ.5ರಿಂದ ಮಾ.26ರವರೆಗೆ ವಿಸ್ತರಿಸಲಾಗಿದೆ.

ಯಲಹಂಕದಿಂದ ಪ್ರತಿ ಶನಿವಾರ ಹೊರಡುವ ರೈಲು ಸಂಖ್ಯೆ 02864 ಯಲಹಂಕ-ಸಾಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಈ ಮೊದಲು ಫೆ.28ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಈಗ ಇದನ್ನು ಮಾ.7ರಿಂದ ಮಾ.28ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲುಗಳು ಎರಡೂ ದಿಕ್ಕುಗಳಲ್ಲಿ ತಲಾ 4 ಟ್ರಿಪ್‌ಗಳನ್ನು ಪೂರೈಸಲಿವೆ. ಸಾರ್ವಜನಿಕರು ಹಾಗೂ ಪ್ರಯಾಣಿಕರು ಈ ವಿಸ್ತೃತ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.