ಮನೆ ಸುದ್ದಿ ಜಾಲ ಗಾಯಕಿ ಯಶಿಂದರ್ ಕೌರ್ ಶವವಾಗಿ ಪತ್ತೆ: ಮದುವೆ ಪ್ರಪೋಸಲ್ ತಿರಸ್ಕರಿದ್ದಕ್ಕೆ ಕಿಡ್ನ್ಯಾಪ್  ಮಾಡಿ ಕೊಲೆ ಮಾಡಲಾಗಿದೆ

ಗಾಯಕಿ ಯಶಿಂದರ್ ಕೌರ್ ಶವವಾಗಿ ಪತ್ತೆ: ಮದುವೆ ಪ್ರಪೋಸಲ್ ತಿರಸ್ಕರಿದ್ದಕ್ಕೆ ಕಿಡ್ನ್ಯಾಪ್  ಮಾಡಿ ಕೊಲೆ ಮಾಡಲಾಗಿದೆ

0

ಪಂಜಾಬಿ ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಪಂಜಾಬ್‌ನ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಮೇ 13ರಂದು ನಾಪತ್ತೆಯಾಗಿದ್ದ ಅವರ ಬಗ್ಗೆ ಕುಟುಂಬ ದೂರು ನೀಡಿತ್ತು. ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಇಬ್ಬರು ಶಂಕಿತರು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

29 ವರ್ಷದ ಪಂಜಾಬಿ ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಮೇ 19ರಂದು ಪಂಜಾಬ್‌ನ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ದುರಂತ ಘಟನೆಯಿಂದ ಪಂಜಾಬಿ ಸಂಗೀತ ಲೋಕ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಮೃತದೇಹ ಸಿಕ್ಕ ತಕ್ಷಣ ಕುಟುಂಬಸ್ಥರು ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಮೃತದೇಹವನ್ನು ಸಮ್ರಾಲಾದ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅವರ ನಾಪತ್ತೆ ಮತ್ತು ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇಂದರ್ ಕೌರ್ ಅವರು ಮೇ 13ರ ಸಂಜೆ ದಿನಸಿ ತರಲೆಂದು ಮನೆಯಿಂದ ಹೊರಗೆ ಹೋಗಿದ್ದರು. ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ತೆರಳಿದ್ದ ಅವರು, ಮನೆಗೆ ಹಿಂತಿರುಗದಿದ್ದಾಗ ಮತ್ತು ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಕುಟುಂಬಕ್ಕೆ ಆತಂಕ ಶುರುವಾಗಿತ್ತು. ಮೊದಲು ಕುಟುಂಬದವರೇ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಗದಿದ್ದಾಗ, ಪೊಲೀಸರಿಗೆ ದೂರು ನೀಡಿದ್ದಾರೆ.

ಅವರ ಸಹೋದರ ಜೋತಿಂದರ್ ಸಿಂಗ್ ನೀಡಿದ ದೂರಿನ ಅನ್ವಯ, ಮೇ 15ರಂದು ಎಫ್‌ಐಆರ್ ದಾಖಲಾಗಿತ್ತು. ದೂರಿನಲ್ಲಿ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖ ಮತ್ತು ಆತನ ಸಹಚರ ಕರಮ್‌ಜಿತ್ ಸಿಂಗ್ ಅವರನ್ನು ಶಂಕಿತರೆಂದು ಹೆಸರಿಸಲಾಗಿದೆ. ತನಿಖೆ ವೇಳೆ, ಆರೋಪಿಗೆ ಇಂದರ್ ಕೌರ್ ಅವರ ವೈಯಕ್ತಿಕ ಪರಿಚಯವಿತ್ತು ಎಂಬುದು ತಿಳಿದುಬಂದಿದೆ. ಕುಟುಂಬದವರ ಪ್ರಕಾರ, ಸುಖ್ವಿಂದರ್ ಸಿಂಗ್ ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದೇ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಆಕೆಯನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ ನಂತರ ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಪ್ರಮುಖ ಆರೋಪಿ ಈ ಘಟನೆಯ ನಂತರ ಕೆನಡಾಗೆ ಪರಾರಿಯಾಗಿರಬಹುದು ಎಂದೂ ಅವರು ಹೇಳಿದ್ದಾರೆ. ಪೊಲೀಸರು ಈ ಆರೋಪಗಳನ್ನು ಪರಿಶೀಲಿಸಲು, ಶಂಕಿತರನ್ನು ಪತ್ತೆಹಚ್ಚಲು ಮತ್ತು ಈ ಅಪರಾಧದ ಹಿಂದಿನ ಸಂಪೂರ್ಣ ಸತ್ಯವನ್ನು ಬಯಲಿಗೆಳೆಯಲು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.