ಚಿಕ್ಕಮಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಸಮೀಪದ ಕಲ್ಲೊಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಪ್ತಮಿ (14) ಎಂದು ಗುರುತಿಸಲಾಗಿದೆ. ಸಪ್ತಮಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬೇಸಿಗೆ ರಜೆ ಹಿನ್ನೆಲೆ ಅಜ್ಜಿಯ ಮನೆಗೆ ಬಂದಿದ್ದಳು. ಮನೆಯ ಅಟ್ಟದ ಮೇಲೆ ಆಟವಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಟ್ಟದ ಮೇಲಿಂದ ಏಣಿಯ ಮೂಲಕ ಕೆಳಗೆ ಇಳಿಯುವ ಸಂದರ್ಭದಲ್ಲಿ ಏಣಿಗೆ ಕಟ್ಟಿದ್ದ ಸೀರೆಯ ಹಗ್ಗ ಆಕೆಯ ಕುತ್ತಿಗೆಗೆ ಬಿಗಿದುಕೊಂಡು ಅಸ್ವಸ್ಥಳಾಗಿದ್ದಾಳೆ. ಮನೆಯವರು ಹಾಗೂ ಸ್ಥಳೀಯರು ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಪ್ತಮಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಘಟನಾ ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಆಕಸ್ಮಿಕ ದುರ್ಘಟನೆ ಎಂದು ತಿಳಿದು ಬಂದಿದೆ. ಬೇಸಿಗೆ ರಜೆಗೆ ಸಂತಸದಿಂದ ಅಜ್ಜಿ ಮನೆಗೆ ಬಂದಿದ್ದ ಬಾಲಕಿ ಇಂತಹ ದುರ್ಘಟನೆಯಲ್ಲಿ ಸಾವನ್ನಪ್ಪಿರುವುದು ಎಲ್ಲರ ಮನಕಲಕುವಂತಾಗಿದೆ. ಹಾಗೂ ಶೃಂಗೇರಿ ಠಾಣಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಇದೊಂದು ಆಕಸ್ಮಿಕ ಘಟನೆ. ಅಟ್ಟದಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡ ಪರಿಣಾಮ ಸಪ್ತಮಿ ಎಂಬ ಬಾಲಕಿ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ಬಾಲಕಿಯು ಮರ್ಕಲ್ ಗ್ರಾಮದ ಕೋಗಿನ ಬೈಲು ನಿವಾಸಿಯಾಗಿದ್ದು, ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಾಯಿಯೊಂದಿಗೆ ಅಜ್ಜ – ಅಜ್ಜಿಯ ಮನೆಗೆ ಬಂದಿದ್ದಳು. ಅಟ್ಟಕ್ಕೆ ಏರಿಳಿಯಲು ಬಳಸಲಾಗುತ್ತಿದ್ದ ನೈಲಾನ್ ಸೀರೆಯ ಬಟ್ಟೆಯಿಂದ ಮಾಡಿದ್ದ ಹಗ್ಗವನ್ನು ಹಿಡಿದು ಕೆಳಕ್ಕೆ ಇಳಿಯುವ ವೇಳೆ ಕಾಲು ಜಾರಿ, ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದೆ. ಮನೆಯವರು ತಕ್ಷಣ ಬಾಲಕಿಯನ್ನು ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಸಪ್ತಮಿ ಮೃತಪಟ್ಟಿದ್ದಾಳೆ. ಬಾಲಕಿಯ ತಂದೆ ಗಜೇಂದ್ರ ಅವರು ನೀಡಿದ ದೂರಿನ ಮೇರೆಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

















