ಟಿ20 ವಿಶ್ವಕಪ್‌ನಲ್ಲಿ ಭಾರತ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಅಹಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೈಯಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ದೇವರ ಆಶೀರ್ವಾದ ಪಡೆದಿದ್ದಾರೆ. ನೆನ್ನೆ (ಭಾನುವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಅದ್ಭುತ ಜಯ ಸಾಧಿಸಿದ ನಂತರ, ದಾಖಲೆಯ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಭಾರತ ಗೆದ್ದುಕೊಂಡಿತು.
ಟಾಸ್ ಗೆದ್ದು ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಶರ್ಮಾ (21 ಎಸೆತಗಳಲ್ಲಿ 52 ರನ್, ಆರು ಬೌಂಡರಿ ಮತ್ತು ಮೂರು ಸಿಕ್ಸರ್) ಅವರ ದಾಖಲೆಯ ಅರ್ಧಶತಕ ಮತ್ತು ಸ್ಯಾಮ್ಸನ್ ಅವರೊಂದಿಗೆ 98 ರನ್‌ಗಳ ಜೊತೆಯಾಟವು ನ್ಯೂಜಿಲೆಂಡ್ ತತ್ತರಿಸುವಂತೆ ಮಾಡಿತು. ನಂತರ ಸ್ಯಾಮ್ಸನ್, ಇಶಾನ್ ಕಿಶನ್ (25 ಎಸೆತಗಳಲ್ಲಿ 54, ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ) ಅವರೊಂದಿಗೆ ಶತಕದ ಜೊತೆಯಾಟವಾಡಿ ಭಾರತವನ್ನು 16 ನೇ ಓವರ್‌ನಲ್ಲಿ 200 ರನ್‌ಗಳ ಗಡಿ ದಾಟಿಸಲು ನೆರವಾದರು.
ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳ ಬಿದ್ದಿದ್ದರಿಂದ ಸ್ವಲ್ಪ ನಿಧಾನಗತಿಯ ನಂತರ ಶಿವಂ ದುಬೆ (8 ಎಸೆತಗಳಲ್ಲಿ 26 ರನ್, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್) ಅಮೂಲ್ಯ ರನ್‌ಗಳನ್ನು ಗಳಿಸುವ ಮೂಲಕ ಭಾರತವನ್ನು 255/5 ಕ್ಕೆ ಕೊಂಡೊಯ್ದರು. ಇದು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತ್ಯಧಿಕ ಮೊತ್ತವಾಯಿತು. 256 ರನ್‌ಗಳ ರನ್ ಬೆನ್ನಟ್ಟಿದ ನ್ಯೂಜಿಲೆಂಡ್ ಸೋಲನುಭವಿಸಿತು.
ಭಾರತದ ಪರ ಅಕ್ಷರ್ ಪಟೇಲ್ (3/23) ಮತ್ತು ಜಸ್ಪ್ರೀತ್ ಬುಮ್ರಾ (4/15) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ (26 ಎಸೆತಗಳಲ್ಲಿ 52 ರನ್, ಎರಡು ಬೌಂಡರಿ ಮತ್ತು ಐದು ಸಿಕ್ಸರ್) ಅರ್ಧಶತಕ, ಡ್ಯಾರಿಲ್ ಮಿಚೆಲ್ (17) ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್) ಹೊರತಾಗಿಯೂ ಕಿವೀಸ್ ಕೇವಲ 159 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.















