ಮನೆ ರಾಜ್ಯ ಮೈಸೂರಿನಲ್ಲಿ ವಿಷಕಾರಿ ತ್ಯಾಜ್ಯ ವಿಲೇವಾರಿ – ಕ್ರಮಕ್ಕೆ ನಿವಾಸಿಗಳ ಆಗ್ರಹ..!

ಮೈಸೂರಿನಲ್ಲಿ ವಿಷಕಾರಿ ತ್ಯಾಜ್ಯ ವಿಲೇವಾರಿ – ಕ್ರಮಕ್ಕೆ ನಿವಾಸಿಗಳ ಆಗ್ರಹ..!

0

ಮೈಸೂರು : ನಗರದ ನೇತಾಜಿ ನಗರ ಪೊಲೀಸ್ ಬಡಾವಣೆ ಸುತ್ತಮುತ್ತ, ಪ್ರದೇಶದಲ್ಲಿ ಅಕ್ರಮವಾಗಿ ಕಸ ಹಾಗೂ ವಿಷಕಾರಿ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಲಿತಾದ್ರಿಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ, ಸ್ಮಶಾನದ ಪಕ್ಕದಲ್ಲಿ ಸುಮಾರು ಒಂದು ಕಿಲೋಮೀಟರ್ ಜೋಡಿ ರಸ್ತೆಯ ಎಡಭಾಗದಲ್ಲಿ ಕೆಲವರು ಆಟೋಗಳ ಮೂಲಕ ಹಾಸಿಗೆ, ದಿಂಬುಗಳು, ಪ್ಲಾಸ್ಟಿಕ್ ಕವರ್‌ಗಳು ಹಾಗೂ ಇತರೆ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಕಸದ ರಾಶಿ ಹೆಚ್ಚುತ್ತಿದ್ದು ಪರಿಸರಕ್ಕೆ ಹಾನಿಯಾಗುತ್ತಿದೆ.

ಬೇಸಿಗೆ ಸಮಯದಲ್ಲಿ ಈ ಕಸದ ರಾಶಿಗೆ ಬೆಂಕಿ ತಗುಲುವ ಸಂಭವ ಹೆಚ್ಚಿದ್ದು, ಉರಿಯುವಾಗ ಉಂಟಾಗುವ ವಿಷಕಾರಿ ಹೊಗೆಗೆ ಸಮೀಪದ ಚಾಮುಂಡಿ ಬೆಟ್ಟ ತಪ್ಪಲಿನ ಪ್ರದೇಶಗಳು ಹಾಗೂ ನೇತಾಜಿ ನಗರ ಪೊಲೀಸ್ ಬಡಾವಣೆಯ ಮನೆಗಳಿಗೆ ಹರಡುತ್ತದೆ. ಇದರಿಂದ ಸ್ಥಳೀಯರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿ ಎದುರಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಇದೇ ಪ್ರದೇಶದ ಸಮೀಪದಲ್ಲಿರುವ JSS Ayurvedic Hospital ಹಾಗೂ Nirmala Hospital ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮೇಲೂ ಇದರ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲದೆ, ಸಮೀಪದಲ್ಲಿರುವ ಕೆರೆಯಲ್ಲಿಯೂ ಕಸ ಸುರಿಯಲಾಗುತ್ತಿದ್ದು, ಇದರಿಂದ ಕೆರೆ ನಿಧಾನವಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಪ್ರದೇಶದಲ್ಲಿ ವಾಸಿಸುವ ನಿವೃತ್ತ ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗೂ ಇದರಿಂದ ತೀವ್ರ ತೊಂದರೆ ಉಂಟಾಗಿದೆ.

ಈ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಸ ವಿಲೇವಾರಿಯನ್ನು ತಡೆಯಬೇಕು ಹಾಗೂ ಪ್ರದೇಶವನ್ನು ಸ್ವಚ್ಛವಾಗಿಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.