ಬೆಂಗಳೂರು : ಒಳಮೀಸಲಾತಿ ಒಳ ಜಗಳಕ್ಕೆ ಸರ್ಕಾರ ಕೊನೆಗೂ ಮದ್ದರೆದಿದೆ. ದಲಿತ ಎಡಗೈಗೆ 5.25%, ದಲಿತ ಬಲಗೈಗೆ 5.25%, ಸ್ಪೃಶ್ಯರಿಗೆ 4.5% ಮೀಸಲಾತಿ. ಒಟ್ಟು 15% ಮೀಸಲಾತಿ ಕೊಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಒಳಮೀಸಲಾತಿ ಬಗ್ಗೆ ಹೋರಾಟ ಬಹಳ ವರ್ಷದಿಂದ ನಡೆದಿದೆ. ಅದಾದ ನಂತರ ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಪರಿಶಿಷ್ಟ ವರ್ಗದ ಸಮಾವೇಶ ಏರ್ಪಾಡು ಮಾಡಿದ್ದೆವು. ಸಮಾವೇಶದಲ್ಲಿ ಎಲ್ಲಾ ಎಸ್‌ಸಿ ಸಮುದಾಯದವರು ಭಾಗವಹಿಸಿದ್ದರು. ಅಲ್ಲಿ ಒಳಮೀಸಲಾತಿ ಜಾರಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಪ್ರಣಾಳಿಕೆಯಲ್ಲೂ ನಾವು ಒಳಮೀಸಲಾತಿ ಭರವಸೆ ನೀಡಿದ್ದೆವು. 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಕೊಡಬಹುದು ಎಂಬ ತೀರ್ಪು ಕೊಟ್ಟಿತು ಎಂದು ವಿವರಿಸಿದರು.
ಒಳಮೀಸಲಾತಿ ಹೋರಾಟ ಬಹಳ ವರ್ಷಗಳಿಂದ ನಡೀತಿದೆ. ಚಿತ್ರದುರ್ಗದಲ್ಲಿ ಪರಮೇಶ್ವರ್ ನೇತೃತ್ವದಲ್ಲಿ ನಾವು ಸಮಾವೇಶ ಮಾಡಿದ್ವಿ. ಅಲ್ಲಿ ಒಳಮೀಸಲಾತಿ ಕೊಡಲಿಕ್ಕೆ ಸರ್ವಾನುಮತದಿಂದ ಒಪ್ಪಿಗೆ ಆಗಿತ್ತು. ನಂತರ ಚುನಾವಣೆಗೂ ಮುನ್ನ ಪರಮೇಶ್ವರ್ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ಮಾಡಿದ್ವಿ. ಅದರಲ್ಲೂ ಒಳಮೀಸಲಾತಿ ಭರವಸೆ ಕೊಟ್ಟಿದ್ವಿ. ನಂತರ 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ತೀರ್ಮಾನ ಬಂತು. ಒಳಮೀಸಲಾತಿ ಕೊಡಿ ಅಂತ ತೀರ್ಪು ಬಂತು. ತೀರ್ಪಿನ ನಂತರ ನಾವು ಒಂದು ಆಯೋಗ ಮಾಡಿದ್ವಿ, ನ್ಯಾ.ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗ ಮಾಡಿದ್ವಿ. ನಾಗಮೋಹನ ದಾಸ್ ವರದಿಗೆ ಸರ್ವಾನುಮತದಿಂದ ಒಪ್ಪಿಗೆ ಕೊಡಲಾಯಿತು.
ಅದರಲ್ಲಿ 6,5,4,1,1 ಒಳಮೀಸಲು ಕೊಡಲಾಗಿತ್ತು. ನಂತರ ನಾವು ಸಂಪುಟ ಸಭೆ ಮಾಡಿ ಎಡಗೈಗೆ 6, ಬಲಗೈಗೆ 6, ಅಲೆಮಾರಿಗಳಿಗೆ 5 ಕೊಡೋ ತೀರ್ಮಾನ ಮಾಡಿದ್ವಿ. ನಂತರ ಅದೇ ಕಾನೂನು ಆಯ್ತು. ಕಾನೂನು ಆದ ಬಳಿಕವೂ ರೋಸ್ಟರ್‌ನಲ್ಲಿ ಗೊಂದಲ ಆಯ್ತು. ನಂತರ ಅಲೆಮಾರಿಗಳು ಕೋರ್ಟ್ಗೆ ಹೋದ್ರು. ಆಗ ಮೀಸಲಾತಿ 50% ಗಿಂತ ಜಾಸ್ತಿ ಇರಬಾರದು ಅಂತ ಹೇಳಿದರು. ನಾಗಮೋಹನ್ ದಾಸ್ ಎಸ್‌ಸಿ, ಎಸ್‌ಟಿಗೆ 24% ಅಂತ ಹೇಳಿದ್ದರು. ಅದರಲ್ಲಿ ಎಸ್‌ಟಿಗೆ 7%, ಎಸ್‌ಸಿಗೆ 17% ಶಿಫಾರಸು ಮಾಡಿದ್ದರು ಎಂದು ತಿಳಿಸಿದರು.
ನಾವು 6,6,5 ಎಸ್‌ಸಿಗೆ 17% ಕಾನೂನು ಮಾಡಿದ್ದೆವು. ಅದಾದ ಮೇಲೆ ಕೋರ್ಟ್ಗೆ ಹೋಗಿದ್ದು. ರೋಸ್ಟರ್ ಪಾಯಿಂಟ್ ಸರಿ ಇಲ್ಲ ಅಂತ ಎಡಗೈ, ಬಲಗೈ ಎಲ್ಲರೂ ಗಲಾಟೆ ಮಾಡುತ್ತಿದ್ದರು. ಹೈಕೋರ್ಟ್ನಲ್ಲಿ ಸ್ಟೇ ಬಂತು. ಒಟ್ಟಾರೆ ಮೀಸಲಾತಿ ಪ್ರಮಾಣ 50% ಗಿಂತ ಮೀರಬಾರದು ಅಂತ ತೀರ್ಪು ಬಂತು. ಹಿಂದೆ ಇಂದಿರಾ ಸಹಾನಿ ಕೇಸ್‌ನಲ್ಲೂ ಇದೇ ತೀರ್ಪು ಬಂದಿತ್ತು. 56% ಕೊಟ್ಟಿದ್ದು ಸರಿಯಲ್ಲ ಅಂತ ಕೋರ್ಟ್ ಹೇಳಿತು. ಹಾಗಾಗಿ, ದಲಿತರಿಗೆ 17% ಬದಲು 15% ಗೆ ಒಳಮೀಸಲಾತಿ ಕೊಡಬೇಕಾಯ್ತು. ನಂತರ ರೋಸ್ಟರ್ ಸರಿಯಿಲ್ಲ ಅಂತ ಮತ್ತೆ ಹೋರಾಟಗಳು ನಡೆದವು. ಕಳೆದ ತಿಂಗಳು ವಿಶೇಷ ಸಚಿವ ಸಂಪುಟ ಮಾಡಕ್ಕಾಗಲಿಲ್ಲ, ನೀತಿ ಸಂಹಿತೆ ಇತ್ತು. ಅದಕ್ಕೆ ಇವತ್ತು ಸಭೆ ಮಾಡಿದ್ವಿ ಎಂದರು.
ಇವತ್ತು ಟೆಕ್ನಿಕಲ್ ಕಮಿಟಿ ವರದಿಯನ್ನು ಕೊಟ್ರು. ಕೋರ್ಟ್ 50% ಹೇಳಿದ್ದರಿಂದ ಎಸ್‌ಸಿಗಳಿಗೆ 15% ಮಾತ್ರ ಬರೋದು. 17%ಗೆ 6,6,5 ಆದರೆ, 15% ಕ್ಕೆ 5.3, 5.3, 4.4 ಆಗುತ್ತೆ ಅಂತ ರಿಪೋರ್ಟ್ ಕೊಟ್ಟಿದ್ದರು. ನಾವು ಅಂತಿಮವಾಗಿ ಕ್ಯಾಬಿನೆಟ್ ತೀರ್ಮಾನ ಮಾಡಿದ್ದು, ದಲಿತ ಎಡಗೈಗೆ 5.25%, ಬಲಗೈಗೆ 5.25%, ಸ್ಪೃಶ್ಯರಿಗೆ 4.5% ಮೀಸಲಾತಿ ನೀಡಲು ಸರ್ವಾನುಮತದಿಂದ ತೀರ್ಮಾನ ಆಗಿದೆ ಎಂದು ತಿಳಿಸಿದರು.
ಹುದ್ದೆಗಳಿಗೆ ನೇಮಕಾತಿ ಸಂಬಂಧ ಹಿಂದಿನ ಅಧಿಸೂಚನೆ ವಾಪಸ್ ಪಡೆದು ಹೊಸ ಅಧಿಸೂಚನೆ ಹೊರಡಿಸ್ತೇವೆ. 56 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸ್ತೇವೆ. ಇದರಲ್ಲಿ ಎಸ್‌ಸಿ ಸಮುದಾಯಕ್ಕೆ ಒಳಮೀಸಲಾತಿ ಕೊಡ್ತೇವೆ. ತುರ್ತಾಗಿ 56 ಸಾವಿರ ಹುದ್ದೆಗಳ ಭರ್ತಿ ಮಾಡ್ಕೋತೀವಿ. ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಪಟ್ಟು 15% ಅಡಿ ಒಳಮೀಸಲಾತಿ ನೀಡಲಾಗಿದೆ. 4.5 ಮೀಸಲಾತಿ ಯಲ್ಲಿ 20% ಅಲೆಮಾರಿ ಜನಾಂಗದ 59 ಜಾತಿಗಳಿಗೆ ಮೀಸಲಾತಿ ಎಂದು ಸಿಎಂ ವಿವರಿಸಿದರು.















