ತುಮಕೂರು : ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕಲ್ಪತರು ನಾಡು ತುಮಕೂರು ಸಾಕ್ಷಿಯಾಗಿದೆ. 20 ವರ್ಷದೊಳಗಿನವರ 4ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದ್ದು, ದೇಶದ ವಿವಿಧ ಭಾಗಗಳಿಂದ ಬಂದ ನೂರಾರು ಯುವ ಪ್ರತಿಭೆಗಳು ತಮ್ಮ ಸಾಧನೆ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆದರೆ, ಆರಂಭದ ದಿನವೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್‌ಗಳು ಪತ್ತೆಯಾಗಿದ್ದು, ಗೊಂದಲ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಕ್ರೀಡಾಕೂಟದ ಪಾರದರ್ಶಕತೆಯ ಬಗ್ಗೆ ಅನುಮಾನಗಳು ಮೂಡಿವೆ.
ದೇಶದ 28 ರಾಜ್ಯಗಳಿಂದ ಸುಮಾರು 1,500ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಇನ್ನು 40 ವಿವಿಧ ಕ್ರೀಡಾ ಚಟುವಟಿಕೆ ನಡೆಯಲಿದ್ದು, ಬಿಸಿಲಿನ ತಾಪಮಾನಕ್ಕೆ ಅನುಗುಣವಾಗಿ ಕ್ರೀಡಾಚಟುವಟಿಕೆಗಳು ಬೆಳಿಗ್ಗೆ ಹಾಗೂ ಸಂಜೆ ನಂತರ ಫೆಡ್ ಲೈಟ್ನಲ್ಲಿ ನಡೆಯಲಿವೆ. ಈ ಕ್ರೀಡಾಕೂಟದಲ್ಲಿ ವಿಜೇತರು ಆಗಸ್ಟ್ ತಿಂಗಳಲ್ಲಿ ಅಮೆರಿಕಾದ ಓರೆಗಾನ್ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಲು ಆಯ್ಕೆ ಆಗಲಿದ್ದಾರೆ.
ಇಂದು ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿಯ ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಸಂಕೀರ್ಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಮುಖಾಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಆದರೆ ಚಾಲನೆ ಸಿಕ್ಕ ಮೊದಲ ದಿನವೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್‌ಗಳು ಪತ್ತೆಯಾಗಿದ್ದು, ಉದ್ದೀಪನ ಮದ್ದು ಬಳಕೆಯ ಅನುಮಾನ ಮೂಡಿದೆ.
ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕ್ರೀಡಾಕೂಟದ ಸ್ಪರ್ಧಾ ನಿರ್ದೇಶಕ ಸತ್ಯನಾರಾಯಣ, ಸಿರಿಂಜುಗಳು ಪತ್ತೆಯಾದ ಬಗ್ಗೆ NADA (national anti doping agency)ಗೆ ಮಾಹಿತಿ ನೀಡಲಾಗುವುದು. ಅವರು ಪರಿಶೀಲಿಸಿ, ತನಿಖೆ ನಡೆಸಲಿದ್ದಾರೆ ಎಂದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ NADAದಿಂದ ಟೆಸ್ಟ್ ಮಾಡಲಾಗುತ್ತದೆ. ಒಂದು ಟೆಸ್ಟ್ 30 ರಿಂದ 40 ಸಾವಿರ ರೂ ವೆಚ್ಚದಾಗಿರುತ್ತದೆ, ಆದರೂ ಸಹ ನಾವು ಮಾಡುತ್ತೇವೆ.
ನೋ ನೀಡಲ್ ಪಾಲಿಸಿ ಇದೆ. ಅವರು ಬಾತ್ ರೂಂನಲ್ಲಿ ತೆಗೆದುಕೊಂಡಾಗ ಗೊತ್ತಾಗುವುದಲ್ಲ. ಖಂಡಿತ ಇದನ್ನು ಕೂಲಂಕುಷವಾಗಿ ನೋಡಲಾಗುವುದು. ಬಾಹಿರವಾರವಾಗಿ ಚುಚ್ಚು ಮದ್ದು ಪಡೆದಿದ್ದರೇ NADA ಕ್ರಮಗೈಕೊಳ್ಳಿದೆ. ಯಾರೇ ಸಿರಿಂಜ್ ತೆಗೆದುಕೊಂಡಿರುವುದು ಪತ್ತೆಯಾದರೆ ಅವರಿಗೆ ನಾಲ್ಕು ವರ್ಷ ಕ್ರೀಡೆಯಿಂದ ಬ್ಯಾನ್ ಮಾಡಲಾಗುವುದು. ದೇಶದ ವಿವಿಧ ರಾಜ್ಯಗಳಿಂದ ಸಣ್ಣಪುಟ್ಟ ಹಳ್ಳಿಗಳಿಂದ ತಮ್ಮದೇ ಕನಸು ಹೊತ್ತು ಬಂದ 20 ವರ್ಷದೊಳಗಿನ ಪ್ರತಿಭೆಗಳ ಭವಿಷ್ಯ ರೂಪಿಸುವ ಕ್ರೀಡ್ರಾಕೂಟದ ನಡುವೆ ಶೌಚಾಲಯದಲ್ಲಿ ಕಂಡ ಸಿರಿಂಜ್‌ಗಳು, ಉದ್ದೀಪನ ಅನುಮಾನ ಮೂಡಿಸಿದ್ದು, ಕೆಲ ಸ್ಪರ್ಧಿಗಳು ಕಳ್ಳಾಟ ನಡೆಸಿರುವ ಶಂಕೆ ಮೂಡಿದೆ.















