ಬೆಂಗಳೂರು : ಒಳ ಸಂದರ್ಶನಕ್ಕೆ ಕೋರ್ಟ್ ಆದೇಶವಿದ್ದರೂ, ನಟ ದರ್ಶನ್‌ಗೆ ಪತ್ನಿ ಮತ್ತು ಮಗನೊಂದಿಗೆ ಪ್ರತ್ಯೇಕ ಒಳ ಸಂದರ್ಶನದ ಅವಕಾಶ ದೊರೆಯುವುದು ಕಷ್ಟಕರವಾಗಿದೆ.
ಜೈಲು ಮ್ಯಾನುವೆಲ್ ನಿಯಮಗಳ ಪ್ರಕಾರ, ಕುಟುಂಬದ ಸದಸ್ಯರೊಂದಿಗೆ ಕೂತು ಮಾತನಾಡುವ ಪ್ರತ್ಯೇಕ ಅವಕಾಶ ಲಭ್ಯವಿಲ್ಲ ಎಂದು ಕಾರಾಗೃಹ ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ, ನ್ಯಾಯಾಲಯದ ಆದೇಶವಿದ್ದರೂ, ದರ್ಶನ್‌ಗೆ ಪ್ರತ್ಯೇಕ ಒಳ ಸಂದರ್ಶನಕ್ಕೆ ಯಾವುದೇ ಅವಕಾಶವಿಲ್ಲ.
ಕಾರಾಗೃಹ ಇಲಾಖೆಯ ಹೊಸ ಸುತ್ತೋಲೆಯು ವಿಶೇಷ ಸಂದರ್ಶನಕ್ಕೆ ಯಾವಾಗ ಅವಕಾಶ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ವಿಶೇಷ ಭೇಟಿಗೆ ಅನುಮತಿ ನೀಡಲಾಗುತ್ತದೆ.
- ಕೈದಿಗೆ ಗಂಭೀರ ಅನಾರೋಗ್ಯ ಅಥವಾ ಗಾಯದಿಂದ ನಡೆಯಲು ಸಾಧ್ಯವಾಗದಿದ್ದಾಗ (ತಿಂಗಳಿಗೆ ಒಮ್ಮೆ).
- ಕುಟುಂಬದಲ್ಲಿ ಸಾವು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದಾಗ.
- ಬಿಡುಗಡೆಯ ದಿನಾಂಕದ ಎರಡು ತಿಂಗಳು ಮುಂಚೆ ಉದ್ಯೋಗ, ವಾಸಸ್ಥಳ, ಅಥವಾ ಸಲಹೆ ಇತ್ಯಾದಿ ವ್ಯವಸ್ಥೆಗಳಿಗಾಗಿ ಸಂದರ್ಶನಕ್ಕೆ ಅವಕಾಶ.
- ಕೈದಿಗಳನ್ನು ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಾಗಿದ್ದರೆ.
ನಿಯಮಗಳು – ಇಂತಹ ವಿಶೇಷ ಸಂದರ್ಶನ ಭೇಟಿಗೂ ಮುನ್ನ ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಬೇಕು:
- ಆಯಾ ಜೈಲು ಮುಖ್ಯಸ್ಥರ ಲಿಖಿತ ಅನುಮತಿ ಕಡ್ಡಾಯ.
- ಜೈಲು ಭದ್ರತಾ ಕಾರಣಗಳಿಗಾಗಿ ಸಿಬ್ಬಂದಿಯ ತಪಾಸಣೆಗೆ ಸಹಕಾರ ನೀಡಬೇಕು.
- ನಿಗದಿತ ಸಂದರ್ಶನ ಕೊಠಡಿಯಲ್ಲಿ ಮಾತ್ರ ಭೇಟಿಗೆ ಅವಕಾಶ.
- ಸಂದರ್ಶನಕ್ಕೆ ಗರಿಷ್ಠ 30 ನಿಮಿಷಗಳವರೆಗೆ ಮಾತ್ರ ಅವಕಾಶ.
- ಒಂದೇ ಬಾರಿಗೆ 5 ಮಂದಿಗೂ ಮೀರಿ ಭೇಟಿಗೆ ಅವಕಾಶವಿಲ್ಲ ಮತ್ತು ಜೈಲು ಅಧಿಕಾರಿಯ ಮೇಲ್ವಿಚಾರಣೆ ಕಡ್ಡಾಯ.
- ಕನಿಷ್ಠ 2 ಕೆಲಸದ ದಿನಗಳ ಮುಂಚೆ ಅರ್ಜಿ ಸಲ್ಲಿಸಬೇಕು.
- ಅತ್ಯವಶ್ಯಕ ಕಾರಣಗಳಿದ್ದರೆ ಕಾರಾಗೃಹ ಡಿಜಿಪಿ ಅನುಮತಿ ಪಡೆಯಬೇಕು.
ಈ ಎಲ್ಲಾ ಕಠಿಣ ನಿಯಮಾವಳಿಗಳ ಹಿನ್ನೆಲೆಯಲ್ಲಿ ನಟ ದರ್ಶನ್‌ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರತ್ಯೇಕ ‘ಒಳ ಸಂದರ್ಶನ’ದ ಅವಕಾಶ ದೊರೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಕಾರಾಗೃಹ ಮೂಲಗಳು ಖಚಿತಪಡಿಸಿವೆ.















