ಮೈಸೂರು(Mysuru): ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ನಡೆ ಪ್ರಕಟಿಸುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ನಂತರ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ. ಸಭೆಯಲ್ಲಿ ಮುಕ್ತ ಚರ್ಚೆ ಮಾಡುತ್ತೇನೆ. ಜನರ ಅಭಿಪ್ರಾಯದಂತೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಇದರಲ್ಲಿ ಯಾವ ಗೊಂದಲಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಐದು ವರ್ಷ ನಾನು ಜೆಡಿಎಸ್ ಶಾಸಕನಾಗಿ ಜನ ಮತ ಹಾಕಿದ್ದಾರೆ. ಹೀಗಾಗಿ ಯಾವುದೇ ಚುನಾವಣೆಯಲ್ಲಿ ಪಕ್ಷ ವಿಪ್ ಕೊಡಲಿ ಬಿಡಲಿ, ನಾನು ಜೆಡಿಎಸ್ ಪರವಾಗಿ ಮತ ಹಾಕುತ್ತೇನೆ. ಯಾಕೆಂದರೆ ನನ್ನ ಆತ್ಮಸಾಕ್ಷಿ ಗೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡುವುದಿಲ್ಲ. ಕಳೆದ ಮೂರು ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಎಂದರು.
ಸಿದ್ದರಾಮೋತ್ಸವ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಇದುವರೆಗೂ ಆಹ್ವಾನ ಪತ್ರಿಕೆ ಬಂದಿಲ್ಲ. ಆಹ್ವಾನ ಪತ್ರಿಕೆ ಬರಲಿ ಬಿಡಲಿ ನಾನು ಸಿದ್ದರಾಮಯ್ಯ ಅವರಿಗೆ ಹಾರೈಸುತ್ತೇನೆ. ಸ್ವಲ್ಪದಿನ ಮುಂಚಿತವಾಗಿಯೇ ನಾನು ಅವರಿಗೆ ಹುಟ್ಟುಹಬ್ಬದ ಶುಭ ಕೋರುತ್ತೇನೆ ಎಂದಿದ್ದಾರೆ.