ಮನೆ ಅಪರಾಧ ಮರ್ಯಾದಾ ಹತ್ಯೆ – ಸಂಬಂಧಿಯನ್ನು ಪ್ರೀತಿಸಿದ್ದಕ್ಕೆ, ಕುಟುಂಬಸ್ಥರಿಂದಲೇ 19ರ ಯುವತಿಯ ಕೊಲೆ ಶಂಕೆ..!

ಮರ್ಯಾದಾ ಹತ್ಯೆ – ಸಂಬಂಧಿಯನ್ನು ಪ್ರೀತಿಸಿದ್ದಕ್ಕೆ, ಕುಟುಂಬಸ್ಥರಿಂದಲೇ 19ರ ಯುವತಿಯ ಕೊಲೆ ಶಂಕೆ..!

0

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮರ್ಯಾದಾ ಹತ್ಯೆಯೊಂದು ಬೆಳಕಿಗೆ ಬಂದಿದೆ. ಸಂಬಂಧಿಯನ್ನು ಪ್ರೀತಿಸಿದ್ದಕ್ಕೆ 19ರ ಯುವತಿಯನ್ನು ಕುಟುಂಬಸ್ಥರು ಕೊಲೆ ಮಾಡಿರುವ ಘಟನೆ ದೆಹಲಿಯ ಹರಿ ನಗರದಲ್ಲಿ ನಡೆದಿದೆ. ಬಿಹಾರ ಮೂಲದ 19 ವರ್ಷದ ಯುವತಿ ಮೃತ ದುರ್ದೈವಿ. ಸಂಬಂಧಿಯೊಬ್ಬರನ್ನು ಪ್ರೀತಿಸುತ್ತಿದ್ದಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

ಬುಧವಾರ (ಏ.1) ಮಧ್ಯಾಹ್ನ ಸುಮಾರಿಗೆ ಕೊಲೆ ನಡೆದಿದೆ. ಮಧ್ಯಾಹ್ನ 2 ಗಂಟೆಗೆ ವ್ಯಕ್ತಿಯೋರ್ವ ಪಿಸಿಆರ್‌ಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಹರಿ ನಗರದಲ್ಲಿ ಕುಟುಂಬಸ್ಥರು ಸೇರಿಕೊಂಡು ಯುವತಿಯನ್ನು ಕೊಲೆ ಮಾಡಿ, ಶವವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮೃತ ಯುವತಿಯ ಗೆಳತಿ ನನ್ನ ಸೋದರ ಸಂಬಂಧಿಯಾಗಿದ್ದು, ನನಗೆ ಮಾಹಿತಿ ನೀಡಿದ್ದಾಳೆ. ಜೊತೆಗೆ ಮೃತ ಯುವತಿ ಸಂಬಂಧಿಕನೋರ್ವನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಂತ್ಯಕ್ರಿಯೆಯನ್ನು ನಿಲ್ಲಿಸಿದ್ದಾರೆ. ಬಳಿಕ ವಿಧಿವಿಜ್ಞಾನ ತಂಡವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ವರದಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮೃತ ಯುವತಿ ಸಂಬಂಧಿಕನೋರ್ವನನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು. ಇದೇ ವಿಚಾರಕ್ಕೆ ಗಲಾಟೆ ನಡೆದು, ಕೊನೆಗೆ ಕೋಪದಲ್ಲಿ ಯುವತಿಯನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಸದ್ಯ ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.