ಬೆಂಗಳೂರು : ಅತ್ತ ಇರಾನ್ ಇಸ್ರೇಲ್ ಸಂಘರ್ಷ ನಿಲ್ಲುತ್ತಿಲ್ಲ. ಇತ್ತ ಆಟೋ ಚಾಲಕರಿಗೆ ಎದುರಾಗಿರುವ ಎಲ್ಪಿಜಿ ಅಭಾವ ನೀಗುತ್ತಿಲ್ಲ. ಇದರ ಮಧ್ಯೆ ಸಮಸ್ಯೆಗೆ ಧ್ವನಿಯಾಗಿ, ಸಂಕಷ್ಟದಲ್ಲಿ ಜೊತೆಯಾಗಬೇಕಿದ್ದ ಸರ್ಕಾರದ ಜನಪ್ರತಿನಿಧಿಗಳು ಇಲ್ಲಿವರೆಗೆ ಸಮಸ್ಯೆ ಕೇಳಿಲ್ಲ. ಈ ಬಗ್ಗೆ ಕೆರಳಿರುವ ಆಟೋ ಸಂಘಟನೆಗಳು, ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿವೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಯುದ್ಧ ನಿಲ್ಲದೇ ರಾಜ್ಯದಲ್ಲಿ ಎದುರಾಗಿರೋ ಎಲ್ಪಿಜಿ ಅಭಾವ ಕೂಡ ದೂರವಾಗಿಲ್ಲ. ಆದರೆ ಇದರ ನೇರ ಎಫೆಕ್ಟ್ ಎದುರಿಸುತ್ತಿರುವ ಆಟೋ ಚಾಲಕರ ಗೋಳು ದಿನ ಕಳೆದಂತೆ ಹೇಳತೀರದಂತಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಆಟೋ ಚಾಲಕರ ಸಹಾಯಕ್ಕೆ ಧಾವಿಸಬೇಕಿದ್ದ ಸರ್ಕಾರ ಮಾತ್ರ, ಉಪಚುನಾವಣೆ ಮತ್ತು ಐಪಿಎಲ್ ಮೂಡ್ನಲ್ಲಿ ಕಾಲ ಕಳೆಯುತ್ತಿದೆ. ಸರ್ಕಾರದ ಈ ನಡೆ ವಿರುದ್ಧ ಕೆರಳಿರುವ ಆಟೋ ಸಂಘಟನೆಗಳು ಸರ್ಕಾರಕ್ಕೆ ಹೋರಾಟದ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿವೆ.
ಸಮಸ್ಯೆ ಜೋರಾಗುತ್ತಿದ್ದರೂ ಸರ್ಕಾರ ಇಲ್ಲಿ ತನಕ ಆಟೋ ಚಾಲಕರ ವಿಚಾರವಾಗಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಆಟೋ ಸಂಘಟನೆಗಳು ಸಭೆ ಮಾಡಿ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿವೆ. ಸದ್ಯ ಉಪಚುನಾವಣೆ ಪ್ರಚಾರ ಮುಗಿಸಿ ನಾಳೆ ಸಿಎಂ, ಡಿಸಿಎಂ ಸೇರಿದಂತೆ ಸಚಿವರೆಲ್ಲರು ವಾಪಸ್ ಆಗಲಿದ್ದಾರೆ.
ಪ್ರಮುಖವಾಗಿ ಆಟೋ ಸಂಘಟನೆಗಳು ಸಿಎಂ, ಡಿಸಿಎಂ, ಸಾರಿಗೆ ಸಚಿವರು, ಆಹಾರ ಸಚಿವರು, ಶಿಕ್ಷಣ ಸಚಿವರ ಭೇಟಿಗೆ ನಿರ್ಧಾರ ಮಾಡಿದ್ದಾರೆ. ಆರ್ಥಿಕ ಹೊಡೆತ ಸಂಬಂಧ ಮನವಿ ಮಾಡಿ, ಆರ್ಥಿಕ ಸಹಾಯಕ್ಕೆ ಮನವಿ ಮಾಡಲು ನಿರ್ಧಾರಿಸಲಾಗಿದೆ. ಜೊತೆಗೆ ಮಕ್ಕಳ ಸ್ಕೂಲ್ ಫೀಸ್ ಪಾವತಿಗೆ 2 ತಿಂಗಳ ಸಮಯಾವಕಾಶ ನೀಡುವಂತೆ ಮನವಿ ಮಾಡುವ ಬಗ್ಗೆ ತೀರ್ಮಾನಿಸಿದ್ದಾರೆ.
ಇದೇ ವಾರದಲ್ಲಿ ಸರ್ಕಾರದ ಜನಪ್ರತಿನಿಧಿಗಳ ಭೇಟಿಗೆ ಆಟೋ ಸಂಘಟನೆಗಳು ನಿರ್ಧಾರ ಮಾಡಿದ್ದು, ಒಂದೊಮ್ಮೆ ಈ ವಾರದಲ್ಲಿ ಸಮಸ್ಯೆ ಸಂಬಂಧ ಸರ್ಕಾರ ಭೇಟಿಗೆ ಅವಕಾಶ ಮಾಡಿಕೊಡದಿದ್ದರೆ ರಾಜ್ಯವ್ಯಾಪಿ ಸಚಿವರ ಮನೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೇ ಆಟೋ ಟ್ಯಾಕ್ಸಿ ಬಂದ್ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ.















