ಟೆಹ್ರಾನ್ : ಅಮೆರಿಕದ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ಪಾಕಿಸ್ತಾನದ ಮೂಲಕ ತನ್ನ ಪ್ರತಿಕ್ರಿಯೆಯನ್ನು ಟ್ರಂಪ್ಗೆ ತಲುಪಿಸಿದೆ. ನಾವು ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪುವುದಿಲ್ಲ. ಈ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಬೇಕಾಗಿದೆ ಎಂದು ಇರಾನ್ ಹೇಳಿದೆ. ಇರಾನ್ನ ಉತ್ತರದ ಜೊತೆಗೆ ಅಮೆರಿಕಕ್ಕೆ 10 ಷರತ್ತುಗಳನ್ನು ಕೂಡ ವಿಧಿಸಿದೆ. ಇದು ಮಧ್ಯಪ್ರಾಚ್ಯ ಪ್ರದೇಶದಾದ್ಯಂತದ ಘರ್ಷಣೆಗಳನ್ನು ಕೊನೆಗೊಳಿಸುವ ಬೇಡಿಕೆಗಳು, ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ಗಳು, ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಪುನರ್ ನಿರ್ಮಾಣಕ್ಕಾಗಿ ಷರತ್ತುಗಳನ್ನು ಒಳಗೊಂಡಿದೆ.
ಮಧ್ಯವರ್ತಿಗಳ ಮೂಲಕ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಂತೆ ಈ ಬೆಳವಣಿಗೆ ನಡೆದಿದೆ. ಪಾಕಿಸ್ತಾನವು ಇರಾನ್ ಮತ್ತು ಅಮೆರಿಕದ ನಡುವೆ ಸಂದೇಶಗಳನ್ನು ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಇರಾನ್ ಜೊತೆ 45 ದಿನಗಳ ಕದನ ವಿರಾಮದ ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದು ಅಮೆರಿಕ ದೃಢಪಡಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ಸಂಭವಿಸಿದೆ. ಆದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಅನುಮೋದಿಸಿಲ್ಲ, ಮಿಲಿಟರಿ ಕಾರ್ಯಾಚರಣೆಗಳು ಕೂಡ ಮುಂದುವರೆದಿವೆ.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ನಡೆಸಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದ ನಂತರ ಪ್ರಾರಂಭವಾದ ಈ ಯುದ್ಧವು ಮಧ್ಯಪ್ರಾಚ್ಯವನ್ನು ಆವರಿಸಿದೆ. ಈ ಯುದ್ಧ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್ನ ವಾಸ್ತವ ದಿಗ್ಬಂಧನವು ತೈಲ ಮತ್ತು ಅನಿಲ ಬೆಲೆಗಳನ್ನು ಗಗನಕ್ಕೇರಿಸಿದೆ.














