ಇಸ್ಲಾಮಾಬಾದ್ : ಹಿಂದೆಂದೂ ಕಾಣದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸಜ್ಜಾಗಿದೆ. ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ಈಗಾಗಲೇ ಇರಾನ್‌ನ ನಿಯೋಗ ಇಸ್ಲಾಮಾಬಾದ್‍ಗೆ ಬಂದಿಳಿದಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಹ ಪಾಕಿಸ್ತಾನಕ್ಕೆ ಹೊರಟಿದ್ದಾರೆ. ಈ ಹಿನ್ನೆಲೆ ಇಸ್ಲಾಮಾಬಾದ್‌ನಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇರಾನ್ ನಿಯೋಗ ಪಾಕ್ ವಾಯುನೆಲೆಗೆ ಬರುತ್ತಿದ್ದಂತೆ ಪಾಕ್ ಸೇನೆ ಎಸ್ಕಾರ್ಟ್ ಮಾಡಿ, ಭದ್ರತೆ ನೀಡಿದೆ.
ಈ ಬೆಳವಣಿಗೆಗಳ ನಡುವೆಯೂ ಲೆಬನಾನ್ ಮೇಲಿನ ದಾಳಿಯನ್ನು ಖಂಡಿಸಿರುವ ಇರಾನ್, ಸಭೆಯಲ್ಲಿ ಭಾಗಿಯಾಗಲ್ಲ ಎಂದು ಹೇಳಿದೆ. ಈ ಮೂಲಕ ಸಭೆಯಲ್ಲಿ ಭಾಗಿಯಾಗಬೇಕಾ, ಬೇಡ್ವಾ ಎಂಬ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ. ಈ ಸಭೆಯಲ್ಲಿ ಭಾಗಿಯಾಗಲು ಇರಾನ್‍ನ ಪರವಾಗಿ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ಆದರೆ ಸಭೆಗೆ ಇರಾನ್‍ನಿಂದ ಯಾರು ಹೊರಟಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ಮಾತನಾಡಿರುವ ಜೆಡಿ ವ್ಯಾನ್ಸ್, ನಾವು ಮಾತುಕತೆಯನ್ನು ಎದುರು ನೋಡುತ್ತಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ಭಾವಿಸುತ್ತೇನೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದಂತೆ ಇರಾನಿಯನ್ನರು ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಲು ಸಿದ್ಧರಿದ್ದರೆ ನಾವು ಖಂಡಿತವಾಗಿಯೂ ಮುಕ್ತವಾಗಿ ಸ್ವೀಕರಿಸುತ್ತೇವೆ. ಆದರೆ, ಅಮೆರಿಕದ ಜೊತೆ ಆಟವಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಈ ಬೆಳವಣಿಗೆಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‍ಗೆ ಟ್ರೂತ್‍ನಲ್ಲಿ ಪೋಸ್ಟ್ ಮಾಡಿ ಕಟು ಎಚ್ಚರಿಕೆ ನೀಡಿದ್ದಾರೆ. ಇರಾನ್ ಬಳಿ ಯಾವುದೇ ಆಯ್ಕೆಗಳು ಉಳಿದಿಲ್ಲ. ಪ್ರಮುಖ ಅಂತರರಾಷ್ಟ್ರೀಯ ಜಲಮಾರ್ಗಗಳ ನಿಯಂತ್ರಣದ ಮೂಲಕ ಜಗತ್ತನ್ನು ಸುಲಿಗೆ ಮಾಡಲು ಇರಾನ್ ಮುಂದಾಗಿದೆ. ಇರಾನಿಯನ್ನರು ಜೀವಂತವಾಗಿರುವುದಕ್ಕೆ ಏಕೈಕ ಮಾರ್ಗ ಸಂಧಾನ ಎಂದು ಎಚ್ಚರಿಸಿದ್ದಾರೆ.
ಶಾಂತಿ ಮಾತುಕತೆಗೂ ಮುನ್ನ ಇರಾನ್ 2 ಷರತ್ತಗಳನ್ನು ಹಾಕಿದೆ. ಈ ಬಗ್ಗೆ ಇರಾನ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯುಎಸ್-ಇರಾನ್ ಕದನ ವಿರಾಮದ ಸಭೆಗೂ ಮೊದಲು ಲೆಬನಾನ್‍ನಲ್ಲಿ ಕದನ ವಿರಾಮ ಆಗಬೇಕು ಮತ್ತು ಮಾತುಕತೆ ಪ್ರಾರಂಭವಾಗುವ ಮೊದಲು ಇರಾನ್‍ನ ನಿರ್ಬಂಧಿತ ಸ್ವತ್ತುಗಳನ್ನು ಬಿಡುಗಡೆ ಮಾಡಬೇಕು ಎಂಬ ಷರತ್ತನ್ನು ಹಾಕಿದೆ.














