ಮನೆ ಸುದ್ದಿ ಜಾಲ ಹೇಮಾ ಮಾಲಿನಿ ಭಾವುಕ : ದಿಗ್ಗಜ ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ

ಹೇಮಾ ಮಾಲಿನಿ ಭಾವುಕ : ದಿಗ್ಗಜ ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ

0

ನವದೆಹಲಿ: ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ 2026ರ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ದಿವಂಗತ ಪತಿ ಧರ್ಮೇಂದ್ರ ಪರವಾಗಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಯನ್ನು ಪತ್ನಿ, ಹಿರಿಯ ನಟಿ ಹೇಮಾ ಮಾಲಿನಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹೇಮಾ ಮಾಲಿನಿ ಭಾವುಕರಾದರು. ಮಗಳೂ ಕೂಡಾ ಕಣ್ಣೀರಿಟ್ಟರು. ಭಾರತೀಯ ಚಿತ್ರರಂಗಕ್ಕೆ ಧರ್ಮೇಂದ್ರ ಅವರ ಐತಿಹಾಸಿಕ ಕೊಡುಗೆಯನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಿದರು. ಹೇಮಾ ಮಾಲಿನಿ ತಿಳಿ ಗುಲಾಬಿ ಬಣ್ಣದ ಸೀರೆ ಧರಿಸಿ, ಮಗಳು ಅಹಾನಾ ಡಿಯೋಲ್ ಅವರೊಂದಿಗೆ ಸಮಾರಂಭಕ್ಕೆ ಸಾಕ್ಷಿಯಾದರು. ಧರ್ಮೇಂದ್ರ ಅವರ ಹೆಸರನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸುತ್ತಿದ್ದಂತೆ, ಹೇಮಾ ಮಾಲಿನಿ ಎಲ್ಲರಿಗೂ ನಮಸ್ಕರಿಸಿ ವೇದಿಕೆಯತ್ತ ನಡೆದರು. ಪ್ರಶಸ್ತಿ ಸ್ವೀಕರಿಸುವ ವೇಳೆ ನಟಿ ಬಹಳ ಭಾವುಕರಾಗಿ ಕಾಣಿಸಿಕೊಂಡರು. ತಮ್ಮ ದಿವಂಗತ ಪತಿಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸುವ ವೇಳೆ ಅವರ ಕಣ್ಣುಗಳು ತುಂಬಿ ಬಂದಿದ್ದವು.ಈ ಭಾವನಾತ್ಮಕ ಕ್ಷಣ ಪುತ್ರಿ ಅಹಾನಾ ಡಿಯೋಲ್ ಅವರನ್ನೂ ಬಹಳ ಭಾವುಕಗೊಳಿಸಿದೆ. ತಾಯಿ ಪ್ರಶಸ್ತಿ ಸ್ವೀಕರಿಸುವ ವೇಳೆ ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾ ಅವರು ಅಳುತ್ತಿದ್ದರು ಎನ್ನಲಾಗುತ್ತಿದೆ.

ಡಿಯೋಲ್ ಕುಟುಂಬದ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಲ್ಲಿ ಇದೂ ಒಂದಾಗಿದ್ದು, ವಿಡಿಯೋ ವೈರಲ್​ ಆಗಿದೆ. ಸಮಾರಂಭಕ್ಕೂ ಮುನ್ನ, ಧರ್ಮೇಂದ್ರ ಅವರ ನಿಧನದ ನಂತರ ಕುಟುಂಬಕ್ಕೆ ಸಲ್ಲುತ್ತಿರುವ ಈ ಗೌರವದ ಬಗ್ಗೆ ಹೇಮಾ ಮಾಲಿನಿ ಮಾತನಾಡಿದ್ದು, “ಇದು ನನಗೆ ಭಾವನಾತ್ಮಕ ಕ್ಷಣ. ಮಗಳು ಅಹಾನಾ ನನ್ನೊಂದಿಗಿದ್ದಾರೆ. ಇಶಾ ಕೂಡಾ ಬರಲು ಬಯಸಿದ್ದರು. ಆದರೆ ಸಾಧ್ಯವಾಗಲಿಲ್ಲ. ಇಡೀ ಕುಟುಂಬ ಸಂತೋಷವಾಗಿದೆ. ಸನ್ನಿ ಡಿಯೋಲ್, ಬಾಬಿ ಡಿಯೋಲ್ ಸೇರಿ ಎಲ್ಲರಿಗೂ ಈ ಬಗ್ಗೆ ತಿಳಿದಿದೆ ಮತ್ತು ಇದು ನಮಗೆಲ್ಲರಿಗೂ ಒಂದು ದೊಡ್ಡ ಕ್ಷಣವಾಗಿದೆ” ಎಂದು ಹೇಳಿದರು. ಪದ್ಮವಿಭೂಷಣ ಭಾರತ ರತ್ನದ ನಂತರ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ಇದನ್ನು ಸಿನಿಮಾ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಮತ್ತು ವಿಶಿಷ್ಟ ಸೇವೆಯನ್ನು ಗುರುತಿಸಿ ನೀಡಲಾಗುತ್ತದೆ.

ಹಾಗೂ ಈ ವರ್ಷ ಧರ್ಮೇಂದ್ರ ಅವರ ಸಾಧನೆಯನ್ನು ಅಭಿಮಾನಿಗಳು ಮತ್ತು ಚಲನಚಿತ್ರೋದ್ಯಮ ವ್ಯಾಪಕವಾಗಿ ಆಚರಿಸಿದೆ. ಹಿಂದಿ ಚಿತ್ರರಂಗದಲ್ಲಿ ಅವರ ದಶಕಗಳ ವೃತ್ತಿಜೀವನವನ್ನು ಮಾತ್ರವಲ್ಲದೇ ಚಲನಚಿತ್ರ ಪ್ರೇಮಿಗಳ ಪೀಳಿಗೆಯ ಮೇಲೆ ಅವರ ಶಾಶ್ವತ ಪ್ರಭಾವವನ್ನೂ ಗೌರವಿಸಲಾಗಿದೆ. ಕಳೆದ 2012ರಲ್ಲಿ ನಟನಿಗೆ ಪ್ರತಿಷ್ಠಿತ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಭಾತದ ಅನೇಕ ಹಿಟ್ ಚಿತ್ರಗಳು ಧರ್ಮೇಂದ್ರ ಅವರ ಹೆಸರಿನಲ್ಲಿದೆ. ಧರ್ಮೇಂದ್ರ ಅವರು ಕಳೆದ ವರ್ಷ ನವೆಂಬರ್​ನಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ದೇಶಾದ್ಯಂತ ನಟರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಭಾರತೀಯ ಚಿತ್ರರಂಗದ ದಿಗ್ಗಜ ನಟನರೆಂದೇ ಗುರುತಿಸಿಕೊಂಡ ಧರ್ಮೇಂದ್ರ ಡಿಸೆಂಬರ್ 8, 1935ರಂದು ಸಿಖ್ ಜಾಟ್ ಕುಟುಂಬದಲ್ಲಿ ಜನಿಸಿದರು. 1960ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಆ್ಯಕ್ಷನ್, ರೊಮ್ಯಾನ್ಸ್, ಕಾಮಿಡಿ ಸೇರಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 6 ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಇಂದಿಗೂ ಅವರ ಸ್ಮರಣೆ ನಾನಾ ರೀತಿಯಲ್ಲಿ ನಡೆಯುತ್ತಿದೆ ಎಂಬುದ್ದಾಗಿದೆ.