ಮನೆ ಸುದ್ದಿ ಜಾಲ ಬೆಂಗಳೂರು: ಸ್ನೇಹಿತರಿಂದ ಆಟೋ ಚಾಲಕನ ಹತ್ಯೆ

ಬೆಂಗಳೂರು: ಸ್ನೇಹಿತರಿಂದ ಆಟೋ ಚಾಲಕನ ಹತ್ಯೆ

0

ಬೆಂಗಳೂರು: ಕುಂಬಳಗೋಡಿನ ರಾಮಸಂದ್ರ ಕೆರೆ ಬಳಿ ಹಣಕಾಸಿನ ವಿಚಾರಕ್ಕೆ ಆಟೋ ಚಾಲಕನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತುಹಾಕಿದ ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಾವರೆಕೆರೆಯ ಉದಯ ಲೇಔಟ್ ನಿವಾಸಿಯಾಗಿದ್ದ ರಕ್ಷಿತ್.ಎನ್ (25) ಹತ್ಯೆಯಾದವರು. ಆರೋಪಿಗಳ ಪೈಕಿ ಮೊಹಿನ್ ಪಾಶಾ ಎಂಬಾತನನ್ನು ಬಂಧಿಸಲಾಗಿದ್ದು, ಹಸನ್ ಎಂಬಾತನಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಯಾಸೆಂಜರ್ ಆಟೋ ಚಾಲಕನಾಗಿದ್ದ ರಕ್ಷಿತ್.ಎನ್ ತನ್ನ ಸ್ನೇಹಿತ ಕಂಬೀಪುರದ ವಾಸಿ ಮೋಹಿನ್ ಪಾಶಾಗೆ ಹಣ ನೀಡಿದ್ದ. ಹಣ ವಾಪಸ್ ಪಡೆದುಕೊಂಡು ಬರುವುದಾಗಿ ಮೇ 24ರಂದು ಸಂಜೆ 6 ಗಂಟೆಗೆ ಮನೆಯಿಂದ ತೆರಳಿದ್ದವನು ಮರಳಿರಲಿಲ್ಲ ಎನ್ನಲಾಗಿದೆ.

ನಂತರ ಮೇ 25ರಂದು ರಕ್ಷಿತ್ ತಾಯಿ ಕಂಬೀಪುರಕ್ಕೆ ತೆರಳಿ ಮೋಹಿನ್ ಪಾಶಾನ ಬಳಿ ಮಗನ ಬಗ್ಗೆ ವಿಚಾರಿಸಿದ್ದರು. ಆಗ ಆರೋಪಿಗಳು ಹಣಕಾಸಿನ ವಿಚಾರಕ್ಕೆ ರಕ್ಷಿತ್ ಜೊತೆ ಗಲಾಟೆ ಮಾಡಿಕೊಂಡು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು, ರಾಮಸಂದ್ರದ ಕೆರೆಯ ಬಳಿ ಹೂತಿರುವುದಾಗಿ ಹಾಗೂ ಆತನ ಆಟೋವನ್ನು ಜ್ಞಾನಭಾರತಿ ಬಳಿ ಬಿಟ್ಟಿರುವುದಾಗಿ ಮೋಹಿನ್ ಪಾಶಾ ಬಾಯ್ಬಿಟ್ಟಿದ್ದ. ರಕ್ಷಿತ್ ತಾಯಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೋಹಿನ್ ಪಾಶಾನನ್ನು ಬಂಧಿಸಿದ್ದಾರೆ. ಸದ್ಯ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಕುಂಬಳಗೋಡು ಠಾಣೆ ಪೊಲೀಸರು ತಿಳಿಸಿದ್ದಾರೆ ಎಂಬುದ್ದಾಗಿದೆ.