ಮನೆ ಸುದ್ದಿ ಜಾಲ ಪರಿಸರ ಸ್ನೇಹಿ ಮೈಸೂರಿಗಾಗಿ ಚಿಣ್ಣರ ಹೆಜ್ಜೆ ಕಾರ್ಯಕ್ರಮ ಉದ್ಘಾಟನೆ..!

ಪರಿಸರ ಸ್ನೇಹಿ ಮೈಸೂರಿಗಾಗಿ ಚಿಣ್ಣರ ಹೆಜ್ಜೆ ಕಾರ್ಯಕ್ರಮ ಉದ್ಘಾಟನೆ..!

0

ಮೈಸೂರು : “ಪರಿಸರ ಸ್ನೇಹಿ ಮೈಸೂರಿಗಾಗಿ ಚಿಣ್ಣರ ಹೆಜ್ಜೆ” ಕಾರ್ಯಕ್ರಮವು ಇಂದು ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸರಸ್ವತಿ ಪ್ರಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕಳೆದ 40 ವರ್ಷಗಳಿಂದ ಮಕ್ಕಳಾಭಿವೃದ್ಧಿ, ಯುವಕರ ಸಬಲೀಕರಣ, ಮಹಿಳಾಭಿವೃದ್ಧಿ ಹಾಗೂ ಸಮುದಾಯ ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಸಂಸ್ಥೆಯು ಮೈಸೂರು, ಗುಂಡ್ಲುಪೇಟೆ, ಗುಲ್ಬರ್ಗ ಮತ್ತು ಬೀದರ್ ತಾಲ್ಲೂಕುಗಳಲ್ಲಿ 40 ಯುವಕರ ಗುಂಪುಗಳನ್ನು ರಚಿಸಿದ್ದು, ರಾಜ್ಯ ಮಟ್ಟದಲ್ಲಿ “ಕರ್ನಾಟಕ ರಾಜ್ಯ ಯೂತ್ ನೆಟ್ವರ್ಕ್” ಅನ್ನು ನಿರ್ಮಿಸಿದೆ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾವಯವ ಗೊಬ್ಬರ ಬಳಕೆ, ಪ್ಲಾಸ್ಟಿಕ್ ನಿಷೇಧ, ಘನತ್ಯಾಜ್ಯ ನಿರ್ವಹಣೆ, ಜಾಗತಿಕ ತಾಪಮಾನ ಮತ್ತು ಪ್ರಕೃತಿ ವಿಕೋಪಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಸುತ್ತಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪರಿಸರ ತಜ್ಞ ಹಾಗೂ ಪರಿಸರವಾದಿ ಪ್ರೊ. ಯು. ಎನ್. ರವಿಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಮಕ್ಕಳು ಮತ್ತು ಯುವಜನರು ಮುಂಚೂಣಿಯಲ್ಲಿದ್ದರೆ ಮಾತ್ರ ಪರಿಣಾಮಕಾರಿ ಬದಲಾವಣೆ ಸಾಧ್ಯವೆಂದು ಹೇಳಿದರು. ಪರಿಸರವನ್ನು ಹಾನಿಗೊಳಿಸುವಲ್ಲಿ ಮಾನವನ ಪಾತ್ರ ಪ್ರಮುಖವಾಗಿದ್ದು, ಕೇವಲ ಮಾತಿನಲ್ಲಿ ಮಾತ್ರವಲ್ಲದೆ ನಿತ್ಯ ಜೀವನದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು. ಪ್ರತಿಯೊಬ್ಬರೂ ಕನಿಷ್ಠ ಐದು ಗಿಡಗಳನ್ನು ನೆಟ್ಟರೆ ಅದು ಒಂದು ಕಾಡಿನ ನಿರ್ಮಾಣಕ್ಕೆ ಕಾರಣವಾಗಬಹುದು ಎಂದು ಅವರು ತಿಳಿಸಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪರಶುರಾಮೇಗೌಡ ಮಾತನಾಡಿ, ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಎಚ್ಚರಿಸಿದರು. ಎಲ್ಲರೂ ಬಟ್ಟೆಯ ಚೀಲಗಳನ್ನು ಬಳಸಬೇಕು ಹಾಗೂ ಮನೆಯಿಂದಲೇ ನೀರಿನ ಬಾಟಲ್ ತೆಗೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಾವು ಮಾತ್ರ ಜಾಗೃತರಾಗುವುದಕ್ಕಿಂತ ಇತರರಲ್ಲಿಯೂ ಅರಿವು ಮೂಡಿಸುವುದು ಮುಖ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಗ್ರಾಮಗಳು ಮತ್ತು ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಮಕ್ಕಳು ಮತ್ತು ಯುವಜನರು ಭಾಗವಹಿಸಿದರು.